ಔಷಧಿ ನೀಡುತ್ತಿಲ್ಲ, ಕುಡಿಯಲು ನೀರು ಸಹ ಕೊಡುವುದಿಲ್ಲ: ಮೈಸೂರಿನ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರ ಅಳಲು

Update: 2020-07-16 17:34 GMT

ಮೈಸೂರು,ಜು.16: ಕೊರೋನ ಸೋಂಕಿತರು ಆಹಾರ ತ್ಯಜಿಸಿ, ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಗರದ ಇಎಸ್‍ಐ ಆಸ್ಪತ್ರೆಯ ಕೊರೋನ ಸೋಂಕಿತರಿಗೆ ಸರಿಯಾದ ಚಿಕಿತ್ಸೆ, ಔಷಧ ನೀಡದೆ ಹಾಗೂ ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಸೋಂಕಿತರು ಆಹಾರ ತ್ಯಜಿಸಿ ವಿಡಿಯೋ ಮೂಲಕ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲ ಅನ್ನೋದು ಸೋಂಕಿತರ ಅಳಲು. ಪಾಸಿಟಿವ್ ಬಂದ ತಕ್ಷಣ ನಮ್ಮನ್ನು ಈ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಐಸೊಲೇಷನ್ ವ್ಯವಸ್ಥೆ ಇದೆ ಎಂದು ಇಲ್ಲಿಗೆ ಕರೆತಂದರು. ಆದರೆ ಈ ಆಸ್ಪತ್ರೆಯವರು ಯಾವ ರೀತಿಯ ಮುಂಜಾಗ್ರತೆಯನ್ನೂ ತೆಗೆದುಕೊಂಡಿಲ್ಲ. ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳೂ ಸೇರಿದಂತೆ ಸರಿಯಾದ ವ್ಯವಸ್ಥೆಯೂ ಇಲ್ಲಿಲ್ಲ. ನಾವು ಪಾಸಿಟಿವ್ ಆಗಿದ್ದೇವೆ ಅನ್ನುವುದಕ್ಕೂ ರಿಪೋರ್ಟ್ ನೀಡುತ್ತಿಲ್ಲ. ಈ ಬಗ್ಗೆ ಆಸ್ಪತ್ರೆಯವರನ್ನು ಕೇಳಿದರೆ ಮಶೀನ್ ಕೆಟ್ಟು ಹೋಗಿದೆ ಅಪ್‍ಡೇಟ್ ಆಗುತ್ತಿಲ್ಲ ಎನ್ನುತ್ತಾರೆ ಅನ್ನೋದು ಸೋಂಕಿತರ ಅಳಲು.

ಈ ಆಸ್ಪತ್ರೆಯಲ್ಲಿರುವ 20 ಸೋಂಕಿತ ಮಹಿಳೆಯರಿಗೆ 2 ಶೌಚಾಲಯವಿದೆ. ಆದ್ರೆ ಶುಚಿತ್ವವಿಲ್ಲ. ಕುಡಿಯಲು ನೀರು ಸಹ ಕೊಡುವುದಿಲ್ಲ, ವೈದ್ಯರು ಬಂದು ನಮ್ಮನ್ನು ವಿಚಾರಿಸುವುದಿಲ್ಲ. ಇಲ್ಲಿಗೆ ಬಂದ ಮೇಲೆ ನಮಗೆ ನೆಗಡಿ ಶುರುವಾಗಿದೆ. ಇದಕ್ಕೆ ಔಷಧಿ ಕೇಳಿದರೆ ಕೊಡುತ್ತಿಲ್ಲ, ವೈದ್ಯರು ಸಹ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸೋಂಕಿತರು ಆರೋಪಿಸಿದ್ದಾರೆ.

ಹೀಗೆ ನೋಡಿಕೊಳ್ಳುವುದಾದರೆ ನಮ್ಮನ್ನು ಮನೆಗೆ ಕಳುಹಿಸಿ. ನಾವು ಮನೆಯಲ್ಲೆ ಹೋಮ್ ಐಸೊಲೇಷನ್ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಆಹಾರ ತ್ಯಜಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಸೋಂಕಿತರು ತಮ್ಮ ಅಳಲು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News