ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಜು.31ರವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚನೆ

Update: 2020-07-16 17:48 GMT

ಬೆಂಗಳೂರು, ಜು.16: ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಎಸೆಸೆಲ್ಸಿ ಮೌಲ್ಯಮಾಪನಕ್ಕೆ ಹಾಗೂ ಕೋವಿಡ್-19ರ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಸಂಶೋಧಕರು, ಗುತ್ತಿಗೆ, ಗೌರವ ಶಿಕ್ಷಕರು ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು ಜು.31ರವರೆಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.

ಮನೆಯಿಂದಲೇ ಕಾರ್ಯನಿರ್ವಹಿಸುವ ಜು.31ರವರೆಗಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸಲಾಗುತ್ತದೆ. ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸುವ ಸಲುವಾಗಿ ಮುಖ್ಯಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಶಿಕ್ಷಕರ ದೂರವಾಣಿ ಸಂಖ್ಯೆಯನ್ನು ಪಡೆದುಕೊಳ್ಳಲಿದ್ದಾರೆ.

ಮನೆಯಿಂದ ಕಾರ್ಯನಿರ್ವಹಿಸುವ ಅವಧಿಯಲ್ಲಿ ಶಿಕ್ಷಕರು, ಬೋಧಕೇತರರು ಯಾವುದೇ ಕಾರಣಕ್ಕೂ ಸದ್ಯ ತಾವಿರುವ ವಾಸಸ್ಥಾನವನ್ನು ಬಿಟ್ಟು ಇತರೆಡೆಗೆ ಹೋಗಕೂಡದು. ಅಗತ್ಯವಿದ್ದಾಗ ಆರೋಗ್ಯ ಇಲಾಖೆಯಿಂದ ಹೊರಡಿಸಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಡ್ಡಾಯವಾಗಿ ಸೇವೆಗೆ ಹಾಜರಾಗಬೇಕಾಗುತ್ತದೆ.

ಸೋಂಕಿತರ ಹಾಗೂ ಸೋಂಕಿನ ಸಂಭಾವ್ಯ ಅಪಾಯದ ಬಗ್ಗೆ ಸೂಚನೆ ನೀಡಲು ಸಹಾಯಕವಾಗಿರುವುದರಿಂದ ಎಲ್ಲ ಶಿಕ್ಷಕರು ತಮ್ಮ ಮೊಬೈಲ್‍ನಲ್ಲಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳಬೇಕು. ಹಾಗೂ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್, ದೂರಸಂಪರ್ಕ, ತಂತ್ರಜ್ಞಾನ ಆಧಾರಿತ ತರಗತಿಗಳನ್ನು ನಡೆಸುವ ಯೋಜನೆಯಿದ್ದು, ಅಂತಹ ಸಂದರ್ಭದಲ್ಲಿ ಶಿಕ್ಷಕರಿಗೆ ವಹಿಸುವ ಕರ್ತವ್ಯಗಳನ್ನು ಪಾಲಿಸಬೇಕೆಂದು ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಆರ್.ಸೋಮಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಾಲೆಗಳು ಪ್ರಾರಂಭವಾಗುವವರೆಗೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಾಹಾರ ಯೋಜನೆಯ ಆಹಾರ ಧಾನ್ಯಗಳು, ಪಠ್ಯ ಪುಸ್ತಕಗಳು ಹಾಗೂ ಸಮವಸ್ತ್ರ ಮುಂತಾದ ಸೌಲಭ್ಯಗಳನ್ನು ವಿತರಿಸುವ ಸಂದರ್ಭದಲ್ಲಿ ಶಿಕ್ಷಕರಿಗೆ ವಹಿಸುವ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News