ಅಪರಾಧ ಚಟುವಟಿಕೆ ಹೆಚ್ಚಳ: ಶಿವಮೊಗ್ಗ ಎಸ್ಪಿ ವಿರುದ್ಧ ಸಚಿವ ಈಶ್ವರಪ್ಪ ಗರಂ
ಶಿವಮೊಗ್ಗ, ಜು.17: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತೀವ್ರ ತರಾಟೆಗೈದಿದ್ದಾರೆ.
ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯಲ್ಲಿ ಗುರುವಾರ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಆಟೋಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ವಾಹನಗಳಿಗೆ ಬೆಂಕಿ ಬಿದ್ದಿದ್ದ ಪ್ರದೇಶಕ್ಕೆ ಸಚಿವ ಈಶ್ವರಪ್ಪ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ಅಪರಾಧ ತಡೆಗಟ್ಟುವಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಸರಿಯಾಗಿ ಕೆಲಸ ಮಾಡುವುದಾದರೆ ಮಾಡಿ, ಇಲ್ಲದಿದ್ದರೆ ಹೊರಡಿ. ಜಿಲ್ಲೆಗೆ ಬೇರೆಯವರನ್ನು ಹಾಕಿಸಿಕೊಳ್ಳುತ್ತೇವೆ ಎಂದು ಕೋಪದಿಂದ ನುಡಿದರು.
ಕಳೆದ ವಾರ ಸಹ ಶಿವಮೊಗ್ಗದ ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಹಾಗೂ ಲಾರಿಗೆ ಬೆಂಕಿ ಹಚ್ಚಲಾಗಿದೆ. ಕೊಲೆ ಪ್ರಕರಣಗಳು ನಡೆಯುತ್ತಿವೆ. ಹೀಗಿದ್ದರೂ ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ, ಇಂತಹ ಪ್ರಕರಣಗಳನ್ನು ಹತ್ತಿಕ್ಕಲು ಮುಂದಾಗಿಲ್ಲ ಎಂಬ ಅಸಮಾಧಾನ ಹೊರಹಾಕಿದರು.