ಜುಲೈ 31ರವರೆಗೆ ಎಲ್ಲಾ ಶನಿವಾರ, ರವಿವಾರ ಕೊಡಗು ಜಿಲ್ಲೆಯಲ್ಲಿ ಲಾಕ್‍ಡೌನ್

Update: 2020-07-17 13:35 GMT
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್

ಮಡಿಕೇರಿ, ಜು.17: ಕೊಡಗು ಜಿಲ್ಲೆಯಲ್ಲಿ ಜೂನ್ 15 ರಿಂದ ಜುಲೈ 31ರ ವರೆಗೆ ಎಲ್ಲಾ ಶನಿವಾರ ಮತ್ತು ರವಿವಾರಗಳಿಗೆ ಅನ್ವಯಿಸುವಂತೆ ಜಾರಿಗೊಳಿಸಲಾಗಿರುವ ಪೂರ್ಣ ದಿನ ಲಾಕ್‍ಡೌನ್ ಅವಧಿಯಲ್ಲಿ ಸಾರ್ವಜನಿಕರು ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ. 

ಆಸ್ಪತ್ರೆ, ಮೆಡಿಕಲ್ ಶಾಪ್, ಫಾರ್ಮಸಿ, ಲ್ಯಾಬ್, ಡಯಾಲಿಸಿಸ್ ಇತ್ಯಾದಿ ವೈದ್ಯಕೀಯ ಸೇವೆಗಳನ್ನು ನೀಡುವ ಕೇಂದ್ರಗಳು, ಪೆಟ್ರೋಲ್ ಬಂಕ್ ಗಳನ್ನು 24x7 ತೆರೆಯಬಹುದು. ಪಡಿತರ ವಿತರಿಸುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ನಿಗಧಿತ ಅವಧಿಯಂತೆ ತೆರೆಯಬಹುದು. ಹಾಲು, ದಿನಪತ್ರಿಕೆಗಳ ವಿತರಣೆಗೆ ಬೆಳಗ್ಗೆ 6 ಗಂಟೆಯಿಂದ ಪೂರ್ವಾಹ್ನ 9 ಗಂಟೆಯವರೆಗೆ ಮಾತ್ರ ಅವಕಾಶ. ಜಿಲ್ಲೆಯೊಳಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ತುರ್ತು, ವೈದ್ಯಕೀಯ, ಅತ್ಯವಶ್ಯಕ, ಸರಕು ಸಾಗಾಣಿಕೆ ಮತ್ತು ಸರ್ಕಾರಿ / ಕೋವಿಡ್-19 ಕರ್ತವ್ಯ ನಿಮಿತ್ತ ಸಂಚರಿಸುವ ವಾಹನಗಳ ಹೊರತಾಗಿ ಉಳಿದಂತೆ ಯಾವುದೇ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ.  

ತುರ್ತು, ವೈದ್ಯಕೀಯ, ಕೋವಿಡ್ ಹಾಗೂ ಕಚೇರಿ ಕರ್ತವ್ಯ ನಿಮಿತ್ತ ಅಧಿಕಾರಿ / ಸಿಬ್ಬಂದಿಗಳ ಸಂಚಾರ ಹೊರತುಪಡಿಸಿ ಉಳಿದಂತೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಪ್ರಸ್ತುತ ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ನಡೆಯುತ್ತಿರುವ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಿರತ ಅಧಿಕಾರಿ / ಸಿಬ್ಬಂದಿಗಳು ಸಂಬಂಧಪಟ್ಟ ಕಚೇರಿ / ಇಲಾಖೆಯಿಂದ ನೀಡಿದ ಗುರುತಿನ ಚೀಟಿಯನ್ನು ಹೊಂದಿರುವುದು ಮತ್ತು ತಪಾಸಣೆ ವೇಳೆ ಹಾಜರುಪಡಿಸುವುದು. 

ಕಚೇರಿ ಕಾರ್ಯನಿರತ ಅಧಿಕಾರಿ / ಸಿಬ್ಬಂದಿಗಳು ಸಂಬಂಧಪಟ್ಟ ಕಚೇರಿಯಿಂದ ನೀಡಿದ ಗುರುತಿನ ಚೀಟಿಯನ್ನು ಜೊತೆಯಲ್ಲಿ ಇರಿಸಿಕೊಂಡು, ತಪಾಸಣೆ ವೇಳೆ ಕಡ್ಡಾಯವಾಗಿ ಹಾಜರುಪಡಿಸುವುದು. ಪೂರ್ವ ನಿಗಧಿಯಾಗಿದ್ದ ಮದುವೆ ಕಾರ್ಯಕ್ರಮಗಳನ್ನು ನಡೆಸುವುದಿದ್ದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತ್ / ನಗರ ಸ್ಥಳೀಯ ಸಂಸ್ಥೆಯಿಂದ ಪಡೆದ ಪೂರ್ವಾನುಮತಿಯ ಮೇರೆಗೆ ಗರಿಷ್ಟ 50 ಮಂದಿ ಮೀರದಂತೆ ಸುರಕ್ಷಿತ ಅಂತರ ಕಾಯ್ದುಕೊಂಡು ನಡೆಸಬಹುದಾಗಿದೆ. 

ಈ ವಿನಾಯಿತಿಯ ಹೊರತಾಗಿ ಉಳಿದಂತೆ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಪೊಲೀಸ್, ಗ್ರಾಮ ಪಂಚಾಯ್ತಿ / ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿಯಮಾನುಸಾರ ಕ್ರಮವಹಿಸುವುದು ಮತ್ತು ನಿಗಾವಹಿಸುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News