×
Ad

ಕೊರೋನದಿಂದ ಏನೂ ಆಗುವುದಿಲ್ಲ, ಭಯಬೇಡ: ಸೋಂಕಿನಿಂದ ಗುಣಮುಖರಾದ ವಿಪ ಸದಸ್ಯ ಪ್ರಾಣೇಶ್

Update: 2020-07-17 19:12 IST

ಚಿಕ್ಕಮಗಳೂರು, ಜು.17: ಕೊರೋನ ಸೋಂಕು ತಗುಲಿ ಆಸ್ಪತ್ರೆಗೆ ಹೋಗುವ ಮುಂಚೆ ನನಗೂ ಭಯವಿತ್ತು. ಕೊರೋನ ಬಂದು ಬಿಟ್ಟಿದೆ ನಾಳೆ ಏನಾಗುತ್ತೋ ಎಂಬ ಸಕಾರಾತ್ಮಕ ಮನೋಭಾವನೆ ಇತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಕೊರೋನದಿಂದ ಏನು ಆಗುವುದಿಲ್ಲ ಎಂಬ ಆತ್ಮವಿಶ್ವಾಸ ಹೆಚ್ಚಾಯಿತು. ಕೊರೋನ ಬಗ್ಗೆ ಭಯಬೇಡ, ಜಾಗ್ರತೆ ವಹಿಸಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ತಿಳಿಸಿದ್ದಾರೆ.

ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಮ್ಮ ನಿವಾಸದಲ್ಲಿ 10 ದಿನಗಳ ಕಾಲ ಹೋಮ್ ಕ್ವಾರಂಟೈನ್ ಆಗಿರುವ ಎಂ.ಕೆ.ಪ್ರಾಣೇಶ್ ತಮ್ಮ ನಿವಾಸದಿಂದ ವಿಡೀಯೋ ಮಾಡಿ ಆಸ್ಪತ್ರೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೊರೋನ ಸೋಂಕಿನಿಂದ ಏನೂ ಆಗುವುದಿಲ್ಲ, ಭಯಬೇಡ. ಅದನ್ನು ಜಾಗೃತೆಯಿಂದ ನಿಭಾಯಿಸಬೇಕು. ಸುರಕ್ಷಿತ ಅಂತರ, ಮಾಸ್ಕ್ ಧರಿಸುವುದರಿಂದ ಕಾಯಿಲೆಯಿಂದ ದೂರವಿರಬಹುದು. ಕೊರೋನದಿಂದ ಜೀವಕ್ಕೆ ಅಪಾಯವಿದೆ ಎಂಬ ಭಾವನೆ ಬೇಡ. ಒಂದೊಂದು ಸೋಂಕು ಕಾಯಿಲೆ ಸೋಂಕಿನ ಲಕ್ಷಣಗಳು ಕಂಡುಬಂದ ತಕ್ಷಣ ಚಿಕಿತ್ಸೆ ಪಡೆದುಕೊಂಡರೆ ಸೋಂಕಿನಿಂದ ಗುಣಮುಖರಾಗಬಹುದು ಎಂದು ತಿಳಿಸಿದ್ದಾರೆ.

ಕೋವಿಡ್-19 ಚಿಕಿತ್ಸಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಡಾಕ್ಟರ್, ನರ್ಸ್, ಇತರೆ ಸಿಬ್ಬಂದಿ ರೋಗಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ತುಂಬಾ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ. ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಾರೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

15 ದಿನಗಳ ಕಾಲನಾನು ಮತ್ತು ನನ್ನ ಪತ್ನಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆವು. ಅಲ್ಲಿ ಕಾರ್ಯನಿರ್ವಹಿಸುವ ಡಾಕ್ಟರ್ ನರ್ಸ್, ಸಿಬ್ಬಂದಿ ಬಹಳ ಚೆನ್ನಾಗಿ ನೋಡಿಕೊಂಡರು. ಕೆ-2 ಸಮಸ್ಯೆಯಿಂದ ಕಳೆದ ಮೂರುವರೆ ತಿಂಗಳಿಂದ ಕೊರೋನ ವಾರಿಯರ್ಸ್ ಗೆ ಸಂಬಳವಾಗಿಲ್ಲ. ಆದರೂ ಬೇಸರ ಮಾಡಿಕೊಳ್ಳದೇ ಸಮಾಜಸೇವೆಯೆಂದು ಭಾವಿಸಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೆಲವರು ಕೊರೋನ ಬಂದರೆ ಬದುಕಲು ಸಾಧ್ಯವೇ ಇಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ. ನೂರಾರು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಕೆಲವು ಮಂದಿ ಅವರಿಗೆ ಬೇರೆ ಬೇರೆ ರೀತಿಯ ಕಾಯಿಲೆ ಇದ್ದರಿಂದ ಮೃತರಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನೇಕ ಸೋಂಕಿತರನ್ನು ಮಾತನಾಡಿಸಿದ್ದೇನೆ. ಆಸ್ಪತ್ರೆಗೆ ಬರುವ ಮೊದಲು ಕೊರೋನ ಎಂದರೆ ಬಾರೀ ಭಯವಿತ್ತು. ಆಸ್ಪತ್ರೆಗೆ ಬಂದ ಮೇಲೆ ಶೀಘ್ರವಾಗಿ ಗುಣಮುಖರಾಗುವ ವಿಶ್ವಾಸವಿದೆ ಎನ್ನುತ್ತಿದ್ದರು. ಮಾದ್ಯಮಗಳು ಕೊರೋನ ಕಾಯಿಲೆ ಬಗ್ಗೆ ದೊಡ್ಡದಾಗಿ ಬಿಂಬಿಸುವ ಕೆಲಸ ಮಾಡದೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಿ ಎಂದು ತಿಳಿಸಿದ್ದಾರೆ.

ಕೊರೋನದಿಂದ ಸಂಪೂರ್ಣವಾಗಿ ಗುಣಮುಖನಾಗಿ ಬಂದಿದ್ದು, ಮನೆಯಲ್ಲಿ 10 ದಿನಗಳ ವಿಶ್ರಾಂತಿ ಪಡೆಯುತ್ತಿದ್ದೇನೆ. ವಿಶ್ರಾಂತಿಯ ನಂತರ ಸದಾ ನಿಮ್ಮ ಜೊತೆ ಇರುತ್ತೇನೆ. ಕೊರೋನದ ಬಗ್ಗೆ ಯಾರು ಧೈರ್ಯಗೆಡುವುದು ಬೇಡ. ಕೊರೋನ ವಾರಿಯರಸ್ ಗಳನ್ನು ಪ್ರೀತಿಯಿಂದ ನೋಡಿ ಎಂದು ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News