ಸಾಲಕ್ಕೆ ಲಂಚ ಪಡೆಯುತ್ತಿದ್ದ ಪ್ರಕರಣ ಬೆಳಕಿಗೆ: ಸ್ವಯಂ ಉದ್ಯೋಗದ ಕನಸು ಕಂಡವರಿಗೆ 'ಎಸಿಬಿ' ಆಸರೆ

Update: 2020-07-17 14:00 GMT

ಶಿವಮೊಗ್ಗ/ಬೆಂಗಳೂರು, ಜು.17: 1 ಲಕ್ಷ ರೂ. ಸಾಲಕ್ಕೆ ಶೇಕಡ 1 ರಷ್ಟು ಪಾಲು ಲಂಚ ಪಡೆಯುತ್ತಿದ್ದ ಪ್ರಕರಣಯೊಂದನ್ನು ಬೇಧಿಸಿರುವ ಎಸಿಬಿ ತಂಡ, ಸ್ವಯಂ ಉದ್ಯೋಗದ ಕನಸು ಕಂಡವರಿಗೆ ಆಸರೆಯಾಗಿದೆ. 

ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಗ್ರಾಮಸ್ಥರೊಬ್ಬರನ್ನು ಗುರಿಯಾಗಿಸಿಕೊಂಡು ಲಂಚಕ್ಕೆ ಬೇಡಿಕೆ ಇಡುತ್ತಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಿಬ್ಬಂದಿಯೊರ್ವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಲೆಗೆ ಬೀಳಿಸಿದ್ದು, ಈ ಮೂಲಕ, ಯೋಜನೆಯ ಫಲಾನುಭವಿಗಳಿಗೆ ನ್ಯಾಯ ಒದಗಿಸಿದಂತೆ ಆಗಿದೆ

ಏನಿದು ಪ್ರಕರಣ?: ಶಿಕಾರಿಪುರ ತಾಲೂಕಿನ ಬಗಣಕಟ್ಟೆಯ ರೈತ ಮಲ್ಲೇಶಪ್ಪ ತಮ್ಮ ಪತ್ನಿ ಎಂ.ಸಾವಿತ್ರಮ್ಮ ಅವರ ಹೆಸರಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು 2018ನೇ ಸಾಲಿನಲ್ಲಿ 1 ಲಕ್ಷ ರೂ. ಸಾಲಕ್ಕಾಗಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಸಾವಿತ್ರಮ್ಮ ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆ ಸಹ ಆಗಿತ್ತು. ಆದರೆ, ಅದನ್ನು ಅನುಮೋದನೆಗೆ ಕಳುಹಿಸಲು ಕಚೇರಿಯ ಕಡತ ನಿರ್ವಾಹಕಿ ಎಂ.ಎಸ್.ಸುನೀತಾ ಎಂಬಾಕೆ ಸಾಲ ಪ್ರಮಾಣದಂತೆ ಶೇ. 1 ರಷ್ಟು ಅಂದರೆ, 1 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ದೂರು ಕೇಳಿಬಂದ ಬೆನ್ನಲ್ಲೇ ಎಸಿಬಿ ಡಿವೈಎಸ್ಪಿ ಲೋಕೇಶ್ ಮತ್ತವರ ತಂಡ ದಾಳಿ ನಡೆಸಿ, ಆಕೆಯನ್ನು ವಶಕ್ಕೆ ಪಡೆದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮೊಕದ್ದಮೆ ಸಹ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಷ್ಟೇ ಅಲ್ಲದೆ, ಈ ಪ್ರಕರಣದ ಪರಿಣಾಮ ನಿಗಮದಲ್ಲಿ ಬಾಕಿ ಇದ್ದ ಎಲ್ಲ 40 ಅರ್ಜಿಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡುವಂತೆ ಎಸಿಬಿ ತಾಕೀತು ಮಾಡಿದ ಹಿನ್ನೆಲೆ ಇದುವರೆಗೂ 25ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿ ಆಗಿದೆ. ಇದರಿಂದ ಗ್ರಾಮೀಣ ಭಾಗದ ಹತ್ತಾರು ಫಲಾನುಭವಿಗಳು ತಮ್ಮ ಸ್ವಇಚ್ಛೆಯಂತೆ ಸ್ವಯಂ ಉದ್ಯೋಗದಲ್ಲಿ ತೊಡಗಲು ಸಹಕಾರಿ ಆಗಿದೆ.

ಸರಕಾರದಿಂದ ನೀಡುವ 1 ಲಕ್ಷ ರೂ. ಸಾಲಕ್ಕಾಗಿ ಎರಡು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದೆ. ಆದರೆ, ಇದಕ್ಕೆ ಅನುಮೋದನೆ ನೀಡಲು ಸಾಲ ಪ್ರಮಾಣದ ಒಂದು ಭಾಗದಷ್ಟು ಲಂಚಕ್ಕೆ ಬೇಡಿಕೆ ಇಡಲಾಯಿತು. ನಾವು ಆ ಯೋಜನೆಯ ಅರ್ಹ ಫಲಾನುಭವಿಯಾಗಿದ್ದರೂ, ಹಣ ನೀಡುವಂತೆ ಒತ್ತಡ ಹೇರಲಾಯಿತು. ತದನಂತರ, ಎಸಿಬಿಗೆ ದೂರು ನೀಡಿದ ಕಾರಣ ನ್ಯಾಯ ದೊರೆತಿದೆ.
-ಮಂಜುಳಾ (ಹೆಸರು ಬದಲಾಯಿಸಲಾಗಿದೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News