ಬೆಳಗಾವಿ: ಆಸ್ಪತ್ರೆಯ ನೆಲದ ಮೇಲೆ ಬೆತ್ತಲಾಗಿ ಒದ್ದಾಡಿದ್ದ ಕೊರೋನ ಸೋಂಕಿತ ವೃದ್ಧ ಸಾವು

Update: 2020-07-17 15:12 GMT
ಸಾಂದರ್ಭಿಕ ಚಿತ್ರ

ಬೆಳಗಾವಿ, ಜು.17: ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆಯ ಕೊರೋನ ವಾರ್ಡ್ ನಲ್ಲಿ ಹೊಟ್ಟೆ ನೋವಿನಿಂದಾಗಿ ಬೆತ್ತಲೆಯಾಗಿ ನೆಲದ ಮೇಲೆ ಒದ್ದಾಡಿದ್ದ 65 ವರ್ಷದ ವೃದ್ಧ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ನೆಲದ ಮೇಲೆ ಒದ್ದಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದ ನಿವಾಸಿ 65 ವರ್ಷದ ವೃದ್ಧ ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ, ಕೊರೋನ ವಾರ್ಡ್ ನಲ್ಲಿ ಬೆಡ್ ಕೊರತೆಯಿಂದಾಗಿ ವೃದ್ಧನನ್ನು ನೆಲದ ಮೇಲೆಯೇ ಹಾಸಿಗೆ ಹಾಕಿ ಮಲಗಿಸಲಾಗಿತ್ತು ಎಂದು ಹೇಳಲಾಗಿದೆ.

ಇದರ ಬೆನ್ನಲ್ಲೇ ಅವರು ಹೊಟ್ಟೆ ನೋವಿನಿಂದಾಗಿ ನೆಲದ ಮೇಲೆ ಒದ್ದಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದ್ದ ಆಸ್ಪತ್ರೆಯ ಸಿಬ್ಬಂದಿ, ವೃದ್ಧರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಮ್ಸ್ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಅವರು, ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ವೃದ್ಧ ಬೆತ್ತಲೆಯಾಗಿ ಒದ್ದಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿ ಗಮನ ಹರಿಸುತ್ತೇನೆ ಎಂದು ಗುರುವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News