ಸಚಿವ ಶ್ರೀರಾಮುಲು ಮನೆಯಲ್ಲಿ ಆಪ್ತನ ನಿಗೂಢ ಸಾವು ಆರೋಪ: ನಿಷ್ಪಕ್ಷಪಾತ ತನಿಖೆಗೆ ಪಟ್ಟು

Update: 2020-07-17 15:39 GMT
ಸಚಿವ ಬಿ.ಶ್ರೀರಾಮುಲು

ಬೆಂಗಳೂರು, ಜು.17: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಆಪ್ತ ಎನ್ನಲಾದ ಮಹೇಶ್ ರೆಡ್ಡಿ ನಿಗೂಢ ಸಾವು ಆರೋಪ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿರುವ ಅವರು, ಬಳ್ಳಾರಿ ಮೂಲದ ಮಹೇಶ್ ರೆಡ್ಡಿ ಯಾನೆ ಉಮಾಮಹೇಶ್ವರ ರೆಡ್ಡಿ ಎಂಬುವರು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಆಪ್ತರಾಗಿದ್ದರು. ಮೇ 29ರಂದು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಸಚಿವರ ಅಧಿಕೃತ ನಿವಾಸದಲ್ಲಿಯೇ ಮೃತಪಟ್ಟಿದ್ದಾರೆ. ತದನಂತರ ಅವರ ಶವವನ್ನು ಬಳ್ಳಾರಿಗೆ ಸಾಗಿಸಿ, ಅದೊಂದು ಸಹಜ ಸಾವು ಎಂದು ಹೇಳಲಾಗುತ್ತಿದೆ ಎಂದು ಇತ್ತೀಚಿಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೆಯೇ ಮೃತದೇಹದ ಕೋವಿಡ್-19 ಪರೀಕ್ಷೆಯೂ ಆಗಿಲ್ಲ ಮತ್ತು ಅಸಹಜ ಸಾವು ಎಂಬ ಸಂಶಯ ಇದ್ದರೂ ಮರಣೋತ್ತರ ಪರೀಕ್ಷೆ ಆಗಿರುವುದಿಲ್ಲ ಎನ್ನುವ ಮಾಹಿತಿ ಇದೆ. ಅಷ್ಟೇ ಅಲ್ಲದೆ, ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸಿಗರೇಟ್ ಮಾರಾಟಗಾರರ ದಂಧೆಯಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ಭಾಗಿ ಪ್ರಕರಣದಲ್ಲಿ ಮಹೇಶರಿಗೂ ಸಂಪರ್ಕ ಇತ್ತು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಹಾಗೆಯೇ, ಕೋವಿಡ್-19 ನಿಯಂತ್ರಣಕ್ಕೆಂದು ಸರಕಾರ ಸಾವಿರಾರು ಕೋಟಿ ರೂ.ಗಳನ್ನು ವೈದ್ಯಕೀಯ ಉಪಕರಣ ಮತ್ತಿತರ ಸಾಮಗ್ರಿಗಳ ಖರೀದಿಗೆ ವೆಚ್ಚ ಮಾಡಿದ್ದು, ಅದರಲ್ಲಿ  ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಆ ವ್ಯವಹಾರಗಳಲ್ಲಿ ಈ ವ್ಯಕ್ತಿಯೂ ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂತಹ ಸ್ಫೋಟಕ ಮಾಹಿತಿ ಇರುವ ವ್ಯಕ್ತಿ ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಬಲ್ಲರು ಎನ್ನುವ ಕಾರಣಕ್ಕೆ ಅಥವಾ ವ್ಯವಹಾರ ಸಂಬಂಧಿತ ವಿವಾದದಿಂದಾಗಿ ಈ ವ್ಯಕ್ತಿಯ ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲಾಗುತ್ತಿದೆ ಎನ್ನುವ ಮಾತುಗಳು ಬಳ್ಳಾರಿ ನಗರದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಸ್ವಯಂಪ್ರೇರಿತರಾಗಿ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಂದ ನಿಪಕ್ಷಪಾತ ತನಿಖೆ ನಡೆಸುವಂತೆ ರವಿಕೃಷ್ಣಾ ರೆಡ್ಡಿ ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News