ರಾಜಸ್ಥಾನ, ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಗೆ ನಾವೇ ಕಾರಣ: ಎಚ್.ವಿಶ್ವನಾಥ್

Update: 2020-07-17 17:36 GMT

ಮೈಸೂರು,ಜು.17: ರಾಜಸ್ಥಾನ ಮತ್ತು ಮಧ್ಯಪ್ರದೇಶದ ಇಂದಿನ ರಾಜಕೀಯ ಬೆಳವಣಿಗೆಗೆ ನಾವೇ ಕಾರಣ, ನಾವು ಹುಟ್ಟುಹಾಕಿದ ಸಂಸ್ಕೃತಿಯಿಂದ ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದ ವಿರುದ್ಧ ಸೆಡ್ಡು ಹೊಡೆದಿದ್ದು ಮೊದಲು ಕರ್ನಾಟಕದಲ್ಲಿ. ಸಂವಿಧಾನದಲ್ಲಿ ಇಂತಹ ಸ್ವಾತಂತ್ರ್ಯ ಹೋರಾಟದ ಮಾದರಿಯ ಹೋರಾಟ ನಡೆಯಬೇಕು. ಇದರಿಂದ ಜನತಂತ್ರ ವ್ಯವಸ್ಥೆಗೆ ಒಂದು ಬೆಲೆ ಬರುತ್ತದೆ. ಒಬ್ಬ ಜನಪ್ರತಿನಿಧಿಯನ್ನು ಅಷ್ಟು ಸುಲಭವಾಗಿ ಕಡೆಗಣಿಸಬಾರದು. ಇತ್ತೀಚೆಗೆ ವಿರೋಧ ಪಕ್ಷದಿಂದ ಆಡಳಿತ ಪಕ್ಷಕ್ಕೆ ಯಾರೂ ಹೋಗುತ್ತಿಲ್ಲ. ಆಡಳಿತ ಪಕ್ಷದಿಂದಲೇ ವಿರೋಧ ಪಕ್ಷದ ಕಡೆಗೆ ಹೋಗ್ತಿದ್ದಾರೆ. ಅದು ಪಕ್ಷಾಂತವರಲ್ಲ. ಅದು ಶಿಕ್ಷೆ ನೀಡುವಂತಹ ಅಪರಾಧವು ಅಲ್ಲ. ರಾಜಸ್ಥಾನದ ರಾಜಕೀಯ ಬೆಳವಣಿಗೆ ಬಗ್ಗೆ ದೇಶದ್ಯಾಂತ ಚರ್ಚೆ ಆಗಬೇಕು. ಸಂವಿಧಾನಕ್ಕೆ ಗೌರವ ನೀಡುವವರು ಈ ಬಗ್ಗೆ ಮಾತನಾಡಬೇಕು ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ ಯುವ ನಾಯಕತ್ವವನ್ನು ದಮನ ಮಾಡಲಾಗುತ್ತಿದೆ. ರಾಹುಲ್‍ ಗಾಂಧಿ ವಯಸ್ಸಿನ ಯುವಕರನ್ನು ತುಳಿಯುವ ಕೆಲಸ ಆಗ್ತಿದೆ. ಮಧ್ಯಪ್ರದೇಶದಲ್ಲಿ ಸಿಂಧ್ಯಾ, ರಾಜಸ್ಥಾನದಲ್ಲಿ ಸಚಿನ್ ಪೈಲೆಟ್. ಈ ಎರಡು ಯುವಕರು ಜಾತ್ಯಾತೀತ ಮನಸ್ಥಿತಿ ಉಳ್ಳವರು. ಕಾಂಗ್ರೆಸ್‍ಗಾಗಿ ದುಡಿದವರು ಈ ಯುವಕರು. ಇವರನ್ನು ತುಳಿಯುವ ಕೆಲಸ ಕಾಂಗ್ರೆಸ್ ನಲ್ಲಿ ನಡೆದಿದೆ. ಅದಕ್ಕೆ ಅವರು ಸಿಡಿದೆದ್ದಿದ್ದಾರೆ. ಇಂತಹ ಪರಿಸ್ಥಿತಿಯಿಂದ ಕಾಂಗ್ರೆಸ್ ದೇಶದಲ್ಲಿ ಕ್ಷೀಣಿಸುತ್ತಿದೆ ಎಂದರು.

ಕುಮಾರಸ್ವಾಮಿ ಪಕ್ಷವನ್ನೇ ಪಕ್ಷಾಂತರ ಮಾಡಿದ್ದಾರೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕು ಬಾರಿ ಪಕ್ಷಾಂತರ ಮಾಡಿದ್ದಾರೆ. ಮಾಜಿ ಸಚಿವ ರಮೇಶ್ ಕುಮಾರ್ ಹತ್ತು ಬಾರಿ ಪಕ್ಷಾಂತರ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷವನ್ನೇ ಪಕ್ಷಾಂತರ ಮಾಡಿದ್ದಾರೆ. ಇಂತವರೆಲ್ಲಾ ನಮ್ಮನ್ನು ಪಕ್ಷಾಂತರಿಗಳು ಎಂದು ಕರೆದರು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಜೆಡಿಎಸ್ ಕಾಂಗ್ರೆಸ್‍ನಲ್ಲಿ ಇರುವುದು ರಾಜಪ್ರಭುತ್ವ. ಅಪ್ಪನೇ ರಾಷ್ಟ್ರಾಧ್ಯಕ್ಷ ಮಗನೇ ರಾಜ್ಯಾಧ್ಯಕ್ಷ. ಎರಡು ಪಕ್ಷದ ರಾಜಪ್ರಭುತ್ವದ ವಿರುದ್ಧವೇ ನಾವು ಸಿಡಿದೆದ್ದಿದ್ದು. ಈಗ ಅದು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಂದುವರಿದಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಆಡಳಿತ ಪಕ್ಷದ ಸಿಎಂಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ಈ ಬಗ್ಗೆ ದೇಶಾದ್ಯಂತ ಚರ್ಚೆ ಆಗಬೇಕು ಎಂದರು.

ಸಿದ್ದರಾಮಯ್ಯನವರೇ ಇದು ಲೆಕ್ಕ ಕೇಳುವ ಸಮಯವಲ್ಲ. ಲೆಕ್ಕ ಎಲ್ಲೂ ಹೋಗೋದಿಲ್ಲ. ಈಗ ಜನರ ರಕ್ಷಣೆ ಸರ್ಕಾರದ ಆದ್ಯತೆ. ಸಿದ್ದರಾಮಯ್ಯಗೆ ಸಹಕಾರ ಕೇಳೋದು ಮಾತ್ರ ಗೊತ್ತು ಕೊಡೋದು ಗೊತ್ತಿಲ್ಲ. ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಸಹಕಾರ ನೀಡಿ. ಹಾಸಿಗೆ ಇಲ್ಲ, ದಿಂಬಿಲ್ಲ ಎನ್ನುವುದು ಬಿಟ್ಟು ಕಾಂಗ್ರೆಸ್ ಕೋವಿಡ್ ಆಸ್ಪತ್ರೆ ಆರಂಭಿಸಿ. ಈ ಮೂಲಕ ಜನರ ನೆರವಿಗೆ ಬನ್ನಿ. ಆಡಳಿತ ಪಕ್ಷ ವಿರೋಧ ಪಕ್ಷ ಎರಡು ಸೇರಿ ಪರಿಸ್ಥಿತಿ ನಿಭಾಯಿಸಬೇಕಿದೆ. ನೀವೂ ಜವಾಬ್ದಾರಿಯಿಂದ ವರ್ತಿಸುವುದನ್ನು ಕಲಿಯಿರಿ. ಲೆಕ್ಕ ಕೇಳುವುದು ತಪ್ಪಲ್ಲ, ಆದರೆ ಈಗ ಅದು ಸಮಯವಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News