ಲಾಕ್‌ಡೌನ್ ಸಂಕಷ್ಟ: ಗಾರೆ ವೃತ್ತಿಯ ಮೊರೆಹೋದ ಗುಂಡ್ಲುಪೇಟೆಯ ಚಿತ್ರಕಲಾ ಶಿಕ್ಷಕ

Update: 2020-07-17 18:09 GMT

ಗುಂಡ್ಲುಪೇಟೆ, ಜು.17: ಕೊರೋನ ಲಾಕ್‌ಡೌನ್ ಸಂಕಷ್ಟದಿಂದಾಗಿ ಚಿತ್ರಕಲಾ ಶಿಕ್ಷಕ ಬೇರೆ ದಾರಿ ಕಾಣದೆ ಗಾರೆ ಕೆಲಸಗಾರರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಕೊರೋನ ಹಾವಳಿಯಿಂದ ಜನ ನಲುಗಿಹೋಗಿದ್ದಾರೆ. ಹೊಟ್ಟೆಪಾಡಿಗಾಗಿ ದುಡಿಮೆಯ ಮಾರ್ಗಗಳು ಬದಲಾಗುತ್ತಿದೆ. ಚಿತ್ರಕಲಾ ಶಿಕ್ಷಕರೊಬ್ಬರು ಕುಂಚ ಹಿಡಿಯುವ ಕೈಯಲ್ಲಿ ಕರ್ಣಿ ಹಡಿದು ಗಾರೆ ಕೆಲಸ ಮಾಡುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ದುಂಡಯ್ಯ ಗಾರೆ ಕೆಲಸಕ್ಕೆ ಮೊರೆ ಹೋದ ಶಿಕ್ಷಕ. 17 ವರ್ಷಗಳ ಕಾಲ ಸಾಕಷ್ಟು ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಕಲಿಸಿದ್ದಾರೆ. ಇವರ ಅಪರೂಪದ ಕಲೆಗೆ ಆರೋಗ್ಯ ಸಚಿವ ಶ್ರೀರಾಮುಲು ಸಹ ಮನಸೋತು ಚಿತ್ರಗಳನ್ನ ಖರೀದಿಸಿ ಪ್ರೋತ್ಸಾಹ ತುಂಬಿದ್ದರು.

ತುಂಬು ಸಂಸಾರದ ಹೊಣೆಹೊತ್ತಿರುವ ದುಂಡಯ್ಯ ಯಾರು ಏನೇ ಅಂದುಕೊಂಡರೂ ಪರವಾಗಿಲ್ಲ ಎಂದು ಗಾರೆ ಕೆಲಸಕ್ಕೆ ಕೈ ಹಾಕಿದ್ದಾರೆ. ದಾರಿಕಾಣದೆ ಜಗಲಿಯೊಂದರ ಮೇಲೆ ಕುಳಿತಿದ್ದಾಗ ಗಾರೆ ಕೆಲಸ ಆಹ್ವಾನ ಬಂತು, ದುಡಿಯಲು ಕೆಲಸ ಯಾವುದಾದರೂ ಏನು? ಎಂದು ಗೌರವಕ್ಕೆ ಅಂಜದೆ ಗಾರೆ ಕೆಲಸಕ್ಕೆ ಮುಂದಾದೆ. ಶಿಕ್ಷಕರಿಗೆ ಉದ್ಯೋಗ ಕಲ್ಪಿಸದ ಚಿತ್ರಕಲಾ ಶಾಲೆಗಳು ಯಾಕೆ ಬೇಕು. ಶಿಕ್ಷಣ ಸಚಿವರಿಗೆ ನಮ್ಮಂತಹ ಬಡ ಮೇಷ್ಟ್ರ ಪರಿಸ್ಥಿತಿ ಅರ್ಥವಾಗುತ್ತಿಲ್ಲವೇ ಎಂದು ದುಂಡಯ್ಯ ಅಳಲು ತೋಡಿಕೊಂಡಿದ್ದಾರೆ.

ವಿವಿಧ ಖಾಸಗಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ದುಡಿದು ಅಪಾರ ಅನುಭವ ಹೊಂದಿರುವ ದುಂಡಯ್ಯರವರಿಗೆ ಕೊರೋನ ಸಂಕಷ್ಟದಿಂದ ಬೀದಿಗೆ ಬರುವಂತಾಗಿದೆ. ಕಳೆದ ನಾಲ್ಕು ತಿಂಗಳಿಂದ ಕೆಲಸವಿಲ್ಲದೆ ಪರದಾಡುವಂತೆ ಮಾಡಿದೆ. ಎರಡು ಮಕ್ಕಳ ತಂದೆಯಾಗಿರುವ ಶಿಕ್ಷಕ ದುಂಡಯ್ಯ ಬೇರೆ ದಾರಿ ಕಾಣದೆ ಸಂಸಾರ ನಡೆಸಲು ಆಯ್ಕೆ ಮಾಡಿಕೊಂಡಿದ್ದು ಗಾರೆ ಕೆಲಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News