×
Ad

ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ: ಪ್ರಮುಖ ನದಿಗಳಲ್ಲಿ ಹರಿವು ಹೆಚ್ಚಳ, ಮುಳುಗಡೆ ಹಂತದಲ್ಲಿ ಹೆಬ್ಬಾಳೆ ಸೇತುವೆ

Update: 2020-07-17 23:54 IST

ಚಿಕ್ಕಮಗಳೂರು, ಜು.17: ಕಾಫಿನಾಡಿನಲ್ಲಿ ಮುಂಗಾರು ಮಳೆ ಬಿರುಸುಗೊಂಡಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯ ಮಲೆನಾಡು ಧಾರಕಾರ ಮಳೆ ಸುರಿಯುತ್ತಿದ್ದು, ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿರುವ ಪ್ರಮುಖ ನದಿಗಳೂ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ, ಸತತ ಮಳೆಯಿಂದಾಗಿ ಕಳಸ ಪಟ್ಟಣದಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಶುಕ್ರವಾರ ಸಂಜೆ ವೇಳೆ ಮುಳುಗಡೆ ಹಂತಕ್ಕೆ ತಲುಪಿದೆ.

ಮಲೆನಾಡು ಭಾಗದಲ್ಲಿ ಬುಧವಾರ ರಾತ್ರಿಯಿಂದ ಶುಕ್ರವಾರ ಸಂಜೆವರೆಗೂ ಭಾರೀ ಮಳೆಯಾಗಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಭಾಗದಲ್ಲಿ ಸತತ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ವ್ಯಾಪ್ತಿ ಸೇರಿದಂತೆ ಕೊಟ್ಟಿಗೆಹಾರ, ಬಾಳೂರು, ಬಾಳೆಹೊಳೆ, ಕುದುರೆಮುಖ, ಸಂಸೆ, ಹೊರನಾಡು ಮತ್ತಿತರ ಕಡೆಗಳಲ್ಲಿ ಹಗಲು ರಾತ್ರಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಬುಧವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಈ ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚುತ್ತಲೇ ಇದೆ. 

ಮಲೆನಾಡು ಭಾಗದಲ್ಲಿ ಸತತ ಮಳೆ ಸುರಿಯುತ್ತಿದ್ದು, ಭದ್ರಾ ನದಿಯ ಒಳ ಹರಿವು ಹೆಚ್ಚುತ್ತಿದ್ದು, ಕಳಸ ಸಮೀಪದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೊರನಾಡು ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಶುಕ್ರವಾರ ಸಂಜೆ ವೇಳೆ ಮುಳುಗುವ ಹಂತಕ್ಕೆ ತಲುಪಿತ್ತು. ಸೇತುವೆ ಮುಳುಗಡೆಗೆ ಎರಡು ಅಡಿಗಳಷ್ಟು ನೀರು ತುಂಬುವುದು ಮಾತ್ರ ಬಾಕಿ ಇದ್ದು, ಮಳೆ ಮುಂದುವರಿದರೆ ಶನಿವಾರ ಬೆಳಗ್ಗೆ ವೇಳೆ ಸೇತುವೆ ಮುಳುಗಡೆಯಾಗಲಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸೇತುವೆ ಮುಳುಗಡೆಯಾದಲ್ಲಿ ಕಳಸ ಮತ್ತು ಹೊರನಾಡು ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿ ಎದುರಾಗಿದೆ. ಹೆಬ್ಬಾಳೆ ಸೇತುವೆ ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ 30ಕ್ಕೂ ಹೆಚ್ಚು ಬಾರೀ ಸೇತುವೆ ಮುಳುಗಡೆಯಾಗಿದ್ದು, ಈ ವರ್ಷ ಮೊದಲ ಬಾರೀ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ. ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ.

ಇನ್ನು ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗಿದ್ದು, ಶುಕ್ರವಾರ ಬೆಳಗಿನಿಂದ ಮಧ್ಯಾಹ್ನದವರೆಗೆ ತುಂತುರು ಮಳೆ ಸುರಿದು ಸಂಜೆ ವೇಳೆ ಸುಮಾರು 1 ಗಂಟೆಗಳ ಕಾಲ ಧಾರಾಕಾರ ಮಳೆ ಆರ್ಭಟಿಸಿತು. ಜಿಲ್ಲೆಯ ಬಯಲುಸೀಮೆ ತಾಲೂಕುಗಳಾದ ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲಿ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಶುಕ್ರವಾರ ಮೂಡಿಗೆರೆ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗಿದ್ದು, ತಾಲೂಕಿನ ಭೂತನಕಾಡು ಗ್ರಾಮ ಸಮೀಪದಲ್ಲಿ ಭಾರೀ ಮಳೆ ಗಾಳಿಗೆ ಬೃಹತ್ ಗಾತ್ರದ ಮರವೊಂದು ಹೆದ್ದಾರಿಗೆ ಉರುಳಿ ಬಿದ್ದಿದೆ. ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸಂಪರ್ಕದ ಹೆದ್ದಾರಿಗೆ ಮರ ಉರುಳಿದ್ದ ಪರಿಣಾಮ ಸುಮಾರು 1 ಗಂಟೆಗಳ ಕಾಲ ಎರಡು ಬದಿಗಳಲ್ಲೂ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಸ್ಥಳೀಯರು ಮರ ತೆರವು ಮಾಡಿದ ಬಳಿಕ ವಾಹನ ಸಂಚಾರ ಆರಂಭವಾಯಿತು.

ಮಳೆ ವಿವರ: ಚಿಕ್ಕಮಗಳೂರು ತಾಲೂಕಿನ ಚಿಕ್ಕಮಗಳೂರು 4.3., ವಸ್ತಾರೆ 12.1., ಜೋಳದಾಳ್ 12.0., ಆಲ್ದೂರು 12.6., ಕೆ.ಆರ್.ಪೇಟೆ 13., ಅತ್ತಿಗುಂಡಿ 16.4., ಸಂಗಮೇಶ್ವರಪೇಟೆ 28.6., ಬ್ಯಾರವಳ್ಳಿ 15.4, ಕಳಸಾಪುರ 5.2., ಮಳಲೂರು 8.2, ದಾಸರಹಳ್ಳಿ 4.0 ಮಿ.ಮೀ. ಮಳೆಯಾಗಿದೆ. ಕಡೂರು ತಾಲ್ಲೂಕಿನ ಕಡೂರು 2.5., ಯಗಟಿ 2.2., ಸಿಂಗಟಗೆರೆ 1.8., ಸಖರಾಯಪಟ್ಟಣ 7.8, ಗಿರಿಯಾಪುರ 4.0., ಬೀರೂರು 22, ಎಮ್ಮೆದೊಡ್ಡಿ 7.2., ಬಾಸೂರು 14.ಮಿ.ಮೀ ಮಳೆಯಾಗಿದೆ. ಕೊಪ್ಪ ತಾಲೂಕಿನ ಕೊಪ್ಪ 77, ಹರಿಹರಪುರ 77., ಜಯಪುರ39.2, ಕಮ್ಮರಡಿ 90.8., ಬಸರೀಕಟ್ಟೆ 46.1 ಮಿ.ಮೀ ಮಳೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಮೂಡಿಗೆರೆ 57.2, ಕೊಟ್ಟಿಗೆಹಾರ 80, ಜಾವಳಿ37., ಗೋಣಿಬೀಡು 40., ಕಳಸ 54.2., ಹಿರೇಬೈಲು 40.2., ಹೊಸಕೆರೆ 52.3 ಮಿ.ಮೀ. ಮಳೆಯಾಗಿದೆ. ನರಸಿಂಹರಾಜಪುರ ಪಟ್ಟಣದಲ್ಲಿ  45.4., ಬಾಳೆಹೊನ್ನೂರು 26.2., ಮೇಗರವಳ್ಳಿ 27ಮಿ.ಮೀ ಮಳೆಯಾಗಿದೆ. ಶೃಂಗೇರಿ ತಾಲೂಕಿನ ಶೃಂಗೇರಿ ಪಟ್ಟಣದ 56., ಕಿಗ್ಗಾ 62.2 ಮಿ.ಮೀ. ಮಳೆಯಾಗಿದೆ. ತರೀಕೆರೆ ಪಟ್ಟಣದಲ್ಲಿ 13.8, ಲಕ್ಕವಳ್ಳಿ 14., ತಣಿಗೆಬೈಲು 17., ಉಡೇವಾ 3.8., ತ್ಯಾಗದಬಾಗಿ 17.,  ಹುಣಸೇಘಟ್ಟ 7., ರಂಗೇನಹಳ್ಳಿ 13.6, ಲಿಂಗದಹಳ್ಳಿ 10.8 ಮಿ.ಮೀ. ಮಳೆಯಾಗಿದೆ. ಹಾಗೂ ಅಜ್ಜಂಪುರ ಪಟ್ಟಣದಲ್ಲಿ 4.8 ಶಿವನಿ 5.0., ಬುಕ್ಕಂಬುದಿ 7 ಮಿ.ಮೀ ಮಳೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News