ಕೊರೋನ ಭ್ರಷ್ಟಾಚಾರದ ಬಗ್ಗೆ ಸಿಎಂ ಯಡಿಯೂರಪ್ಪ ಉತ್ತರ ಕೊಡಬೇಕಿದೆ: ಡಿ.ಕೆ ಶಿವಕುಮಾರ್

Update: 2020-07-18 12:38 GMT

ಬೆಂಗಳೂರು, ಜು.18: ದೇಶದಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ಸಚಿವರು ಜನರನ್ನು ರಕ್ಷಿಸುವ ಬದಲು ದುಡ್ಡು ಬಾಚಿಕೊಳ್ಳುವತ್ತ ಹೆಚ್ಚು ಗಮನ ಹರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೆಪಿಸಿಸಿ ವೈದ್ಯರ ಘಟಕದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಸರಕಾರದ ಭ್ರಷ್ಟಾಚಾರ ಕುರಿತು ಬಂದಿರುವ ವರದಿಗೆ ಸಂಬಂಧಿಸಿದ ಎಲ್ಲ ಆರೋಪಗಳಿಗೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಕೊರೋನ ನಿಯಂತ್ರಣಕ್ಕೆ ಹಾಗೂ ಜನರ ಜೀವ ಉಳಿಸಲು ದೇಶದೆಲ್ಲೆಡೆ ಸರಕಾರಗಳಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಾಸಿಗೆ, ದಿಂಬಿನಿಂದ ಹಿಡಿದು, ವೆಂಟಿಲೇಟರ್, ಪಿಪಿಇ ಕಿಟ್ ಖರೀದಿವರೆಗೂ ಅಕ್ರಮ ನಡೆದಿದೆ. ಇಲ್ಲಿ ಶೇ.5, 10, 20, 30ರಷ್ಟು ಭ್ರಷ್ಟಾಚಾರ ನಡೆದಿಲ್ಲ. ಶೇ.200ರಿಂದ 500ರಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಹಾಸಿಗೆ ಹಗರಣ, ವೆಂಟಿಲೇಟರ್ ಹಗರಣಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿವೆ. ರಾಜ್ಯದಲ್ಲಿ ಮಾಧ್ಯಮಗಳು ಜನರ ಪರ ಧ್ವನಿಯಾಗಿ ಅಂಕಿ ಅಂಶಗಳನ್ನು ನಮ್ಮ ಮುಂದೆ ಇಡುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಇದಕ್ಕೆ ಉತ್ತರ ಹಾಗೂ ಲೆಕ್ಕವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ನಾನು ಅಥವಾ ನಮ್ಮ ವಿರೋಧ ಪಕ್ಷದ ನಾಯಕರು ಈ ವಿಚಾರದ ಬಗ್ಗೆ ಮಾತನಾಡಿದರೆ ಅದನ್ನು ರಾಜಕೀಯ ಆರೋಪ ಎಂದು ದೂರುತ್ತೀರಿ. ಆದರೆ ಮಾಧ್ಯಮಗಳು ಯಾವುದೇ ವೈಯಕ್ತಿಕ ಹಾಗೂ ರಾಜಕೀಯ ಅಜೆಂಡಾ ಇಟ್ಟುಕೊಂಡಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ನೀವು ಈ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡಬೇಕಾಗಿರುವುದು ನಿಮ್ಮ ಕರ್ತವ್ಯ ಎಂದು ಶಿವಕುಮಾರ್ ಹೇಳಿದರು.

ಕಳೆದ 60 ವರ್ಷಗಳಲ್ಲಿ ಮಾನವೀಯ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿರುವ ಅತಿ ದೊಡ್ಡ ಹಗರಣ ಇದಾಗಿದೆ. ಕೊರೋನದಂತಹ ಕಠಿಣ ಸಮಯದಲ್ಲಿ ಇಂತಹ ದೊಡ್ಡ ಭ್ರಷ್ಟಾಚಾರವನ್ನು ಜನರು ನಿರೀಕ್ಷೆ ಮಾಡಿರಲಿಲ್ಲ. ಹಾಸಿಗೆ ವಿಚಾರದಲ್ಲಿ ಅವ್ಯವಹಾರದ ಬಗ್ಗೆ ಗೊತ್ತಾಗಿ ಮುಖ್ಯಮಂತ್ರಿ ಆ ನಿರ್ಧಾರ ವಾಪಸ್ ಪಡೆದಿದ್ದಾರೆ ಎಂದು ಅವರು ತಿಳಿಸಿದರು.

ಅದೇ ರೀತಿ ಸಚಿವರು ಪ್ರತಿ ಹಂತದಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಾಲು ಸಾಲಾಗಿ ಮಂತ್ರಿಗಳಿಗೆ ಕೊರೋನ ಜವಾಬ್ದಾರಿ ವಹಿಸಿದರೂ, ಯಾರೊಬ್ಬರೂ ಆಸ್ಪತ್ರೆಗೆ ಹೋಗಿ ಅಲ್ಲಿನ ಸೋಂಕಿತರ ಜತೆ ಮಾತನಾಡಿ ಅವರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಿಲ್ಲ. ಸಚಿವರು ಜನರನ್ನು ರಕ್ಷಿಸುವ ಬದಲು ದುಡ್ಡು ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಈ ವಿಚಾರವಾಗಿ ಉತ್ತರ ನೀಡಲೇಬೇಕು ಎಂದು ಶಿವಕುಮಾರ್ ಹೇಳಿದರು.

ವೆಂಟಿಲೇಟರ್ ಸಿಗದೆ ಕರ್ನಾಟಕದ ಕೊರೋನ ಸೋಂಕಿತರು ಸಾಯುತ್ತಿದ್ದರೆ, ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್ ಗಳಿಂದ ಹಿಡಿದು ಬೆಡ್ ಗಳವರೆಗೂ ಎಲ್ಲ ಕೊರೋನ ಚಿಕಿತ್ಸೆ ಸಲಕರಣೆಗಳ ಖರೀದಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಬಿಜೆಪಿ ಸರಕಾರ ಕೊರೋನ ಸಂಕಷ್ಟ ಸಂದರ್ಭವನ್ನೂ ಲೂಟಿ ಮಾಡಲು ಬಳಸಿಕೊಂಡಿದೆ. #ಉತ್ತರ ಕೊಡಿ ಬಿಜೆಪಿ". 

'ವೆಂಟಿಲೇಟರ್ ಖರೀದಿಯಲ್ಲಿ ಬಿಜೆಪಿ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಇಲ್ಲಿ ಜಗಜ್ಜಾಹಿರಾಗಿದೆ. ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂ.ಗೆ ಖರೀದಿಸಿದ ವೆಂಟಿಲೇಟರ್ ಗೆ ಕರ್ನಾಟಕ ಸರಕಾರ 18.20 ಲಕ್ಷ ರುಪಾಯಿ ಕೊಟ್ಟಿದೆ. ಈ ಕೊರೋನ ಭ್ರಷ್ಟಾಚಾರದ ಬಗ್ಗೆ ಸಿಎಂ ಯಡಿಯೂರಪ್ಪ ಉತ್ತರ ಕೊಡಬೇಕಿದೆ. #ಉತ್ತರಕೊಡಿಬಿಜೆಪಿ.

-ಡಿ.ಕೆ. ಶಿವಕುಮಾರ್( ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News