ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಿ: ಮುಖ್ಯಮಂತ್ರಿಗೆ ಪತ್ರ ಬರೆದ ಸಿದ್ದರಾಮಯ್ಯ
ಬೆಂಗಳೂರು, ಜು.18: ರಾಜ್ಯ ಸರಕಾರ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ.ಗೌರವ ಧನವನ್ನು ಖಾತರಿಪಡಿಸುವುದು ಸೇರಿ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯ ಸರಕಾರ ಆಶಾ ಕಾರ್ಯಕರ್ತೆಯರನ್ನು ಕೊರೋನ ವಾರಿಯರ್ಸ್ ಎಂದು ಘೋಷಿಸಿದೆ. ಅವರಿಗೆ ಪ್ರಧಾನಿಯಾದಿಯಾಗಿ ಸಾರ್ವಜನಿಕರು ಚಪ್ಪಾಳೆ ತಟ್ಟಿ ಗೌರವಿಸಿದ್ದಾರೆ. ಆದರೆ, ಅವರಿಗೆ ನೀಡುತ್ತಿರುವ ಮಾಸಿಕ ವೇತನ ಕೇವಲ 4 ಸಾವಿರ ರೂ.ನಿಂದ 6 ಸಾವಿರ ರೂ. ಮಾತ್ರವಾಗಿದೆ.
ರಾಜ್ಯ ಸರಕಾರ ಆಶಾ ಕಾರ್ಯಕರ್ತೆಯರಿಗೆ 8 ರಿಂದ 9 ಸಾವಿರ ರೂ.ವರೆಗೆ ನೀಡುವುದಾಗಿ ಬಜೆಟ್‍ನಲ್ಲಿ ಘೋಷಿಸಲಾಗಿದೆ. ಆದರೆ, ಇದುವರೆಗೂ ಒಂದು ರೂಪಾಯಿ ಹೆಚ್ಚಿಸಿಲ್ಲ. ಕಳೆದ ಎಪ್ರಿಲ್‍ನಲ್ಲಿ ಒಂದು ಬಾರಿ ವಿಶೇಷ ಪ್ಯಾಕೇಜ್ ಎಂದು ಸಹಕಾರ ಇಲಾಖೆಯಿಂದ 3 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿತ್ತು. ಇದು ಶೇ.50 ರಷ್ಟು ಕಾರ್ಯಕರ್ತೆಯರಿಗೂ ತಲುಪಿಲ್ಲ. ಕೋವಿಡ್-19 ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು ಸರಕಾರದ ಮುಂದಿಟ್ಟಿರುವ ಬೇಡಿಕೆಗಳು ಅತ್ಯಂತ ಸಣ್ಣ ಮಟ್ಟದಾಗಿದೆ. ಹೀಗಾಗಿ ರಾಜ್ಯ ಸರಕಾರ ಮಾನವೀಯವಾಗಿ ಪರಿಗಣಿಸಿ ಈಡೇರಿಸುವ ಮೂಲಕ ಅವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.