ಕೊರೋನ ಸೋಂಕಿಗೆ ತುತ್ತಾಗಿದ್ದ ನಟ ಹುಲಿವಾನ ಗಂಗಾಧರಯ್ಯ ನಿಧನ
ಬೆಂಗಳೂರು, ಜು.18: ಕೊರೋನ ಸೋಂಕು ದೃಢಪಟ್ಟಿದ್ದ ಹಿರಿಯ ನಟ ಹುಲಿವಾನ ಗಂಗಾಧರಯ್ಯ(70) ಶುಕ್ರವಾರ ರಾತ್ರಿ ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಧುಮೇಹದಿಂದ ಬಳಲುತ್ತಿದ್ದ ಅವರಿಗೆ ಒಂದು ವಾರದ ಹಿಂದೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ ಮೂವರು ಪುತ್ರಿ, ಒಬ್ಬ ಪುತ್ರನಿದ್ದಾನೆ.
ತುಮಕೂರು ಮೂಲದ ಹುಲಿವಾನ ಗಂಗಾಧರಯ್ಯ, ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗಲೇ ರಂಗಭೂಮಿ ಕಡೆಗೆ ಆಸಕ್ತರಾದರು. ನಂತರ ಐಟಿಐ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಲೇ ಸೂತ್ರದಾರ, ರಂಗಸಂಪದ, ಬೆನಕ ರಂಗ ತಂಡಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಆಸ್ಫೋಟ, ಸೂರ್ಯಶಿಕಾರಿ, ಈಡಿಪಸ್, ಕದಡಿದ ನೀರು, ಚೋಮ ಸೇರಿ ಹಲವು ನಾಟಕಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸೇಡಿನ ಹಕ್ಕಿ ಚಿತ್ರದೊಂದಿಗೆ ಸಿನಿಮಾ ಕ್ಷೇತ್ರ ಪ್ರವೇಶಿಸಿದ ಗಂಗಾಧರಯ್ಯ, ಜ್ವಾಲಾಮುಖಿ, ಅದೇ ಕಣ್ಣು, ಕುಲಪುತ್ರ, ನವತಾರೆ, ಸ್ವಸ್ತಿಕ್, ಉಲ್ಟಾಪಲ್ಟಾ ಸೇರಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಕ್ರಾಂತಿ, ಮಹಾಯಜ್ಞ, ಮುಕ್ತ ಮುಕ್ತ, ಮಳೆಬಿಲ್ಲು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ವಿಶಿಷ್ಟ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾಗಿದ್ದರು.