×
Ad

ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 9 ಕೋವಿಡ್ ಪ್ರಕರಣಗಳು ಪತ್ತೆ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

Update: 2020-07-18 17:44 IST

ಮಡಿಕೇರಿ, ಜು.18: ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ 9 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ವೀರಾಜಪೇಟೆ ತಾಲೂಕಿನ ಅಪ್ಪಯ್ಯ ಸ್ವಾಮಿ ರಸ್ತೆಯ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 35 ವರ್ಷದ ಪುರುಷ ಮತ್ತು 14 ವರ್ಷದ ಬಾಲಕ, 64 ವರ್ಷದ ಪುರುಷ ಮತ್ತು 60 ವರ್ಷ ಪ್ರಾಯದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ವೀರಾಜಪೇಟೆ ತಾಲೂಕಿನ ಹುದಿಕೇರಿಯ ಹೈಸೊಡ್ಲೂರುವಿನ 58 ವರ್ಷದ ಪುರುಷ ಜುಲೈ 14 ರಂದು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮರಣ ಹೊಂದಿರುತ್ತಾರೆ. ಇವರಿಗೂ ಸೋಂಕು ದೃಢಪಟ್ಟಿದ್ದು, ಶವ ಸಂಸ್ಕಾರ ಕೋವಿಡ್ ನಿಯಮದಂತೆ ನಡೆದಿದೆ. ಮಡಿಕೇರಿ ತಾಲೂಕಿನ ಕಾನ್ವೆಂಟ್ ಜಂಕ್ಷನ್ ಬಳಿಯ ಟಿ.ಜಾನ್ ಲೇಔಟ್‍ನ 27 ವರ್ಷದ ಪುರುಷನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ 56 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತರಿಗೂ ಸಹ ಸೋಂಕು ದೃಢಪಟ್ಟಿದೆ. ಅಲ್ಲದೆ ಮಡಿಕೇರಿಯ ತಾಳತ್‍ಮನೆಯ 2ನೇ ಕ್ರಾಸ್ ನಿವಾಸಿ ಬೆಂಗಳೂರು ಪ್ರಯಾಣದ ಇತಿಹಾಸವಿರುವ 43 ವರ್ಷದ ಪುರುಷನಿಗೂ ಸೋಂಕು ದೃಢಪಟ್ಟಿದೆ. ಕುಶಾಲನಗರದ ಕಣಿವೆಯ ಬೋಣಿಗೇರಿ ಗ್ರಾಮದ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 25 ವರ್ಷ ಪ್ರಾಯದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ 5 ಹೊಸ ಕಂಟೈನ್‍ಮೆಂಟ್ ಪ್ರದೇಶಗಳನ್ನು ತೆರೆಯಲಾಗಿದೆ. ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆ, ವೀರಾಜಪೇಟೆ ತಾಲೂಕಿನ ಹುದಿಕೇರಿಯ ಹೈಸೊಡ್ಲೂರು, ಮಡಿಕೇರಿ ತಾಲೂಕಿನ ಕಾನ್ವೆಂಟ್ ಜಂಕ್ಷನ್ ಬಳಿಯ ಟಿ.ಜಾನ್ ಲೇಔಟ್, ಮಡಿಕೇರಿಯ ತಾಳತ್‍ಮನೆಯ 2ನೇ ಕ್ರಾಸ್, ಕುಶಾಲನಗರದ ಕಣಿವೆಯ ಬೋಣಿಗೇರಿ ಗ್ರಾಮದಲ್ಲಿ ಕಂಟೈನ್‍ಮೆಂಟ್ ವಲಯವನ್ನು ತೆರೆಯಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 264 ಆಗಿದೆ. 155 ಮಂದಿ ಸಂಪೂರ್ಣವಾಗಿ ಗುಣಮುಖಗೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 5 ಮರಣ ಪ್ರಕರಣಗಳು ವರದಿಯಾಗಿದ್ದು, ಒಟ್ಟು 104 ಸಕ್ರಿಯ ಪ್ರಕರಣಗಳಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಒಟ್ಟು ಕಂಟೈನ್‍ಮೆಂಟ್ ಪ್ರದೇಶಗಳ ಸಂಖ್ಯೆ 110 ಆಗಿದೆ ಎಂದು ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News