×
Ad

ಜ್ಯುವೆಲ್ಲರಿ ದರೋಡೆ ಯತ್ನ ಪ್ರಕರಣದ ಆರೋಪಿಗಳ ಸುಳಿವು ಲಭ್ಯ: ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಮಚ್ಚಿಂದ್ರ

Update: 2020-07-18 18:19 IST

ಚಿಕ್ಕಮಗಳೂರು, ಜು.18: ಇತ್ತೀಚೆಗೆ ನಗರದ ಎಂ.ಜಿ.ರಸ್ತೆಯಲ್ಲಿರುವ ಚಿನ್ನಾಭರಣದ ಅಂಗಡಿಯನ್ನು ನಡೆದ ದರೋಡೆ ಯತ್ನ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ನೇಮಕ ಮಾಡಿದ್ದು, ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಕಾಯ್ ಅಕ್ಷಯ್ ಮಚ್ಚಿಂದ್ರ ತಿಳಿಸಿದ್ದಾರೆ.

ಶನಿವಾರ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಕೇಸರಿ ಆಭರಣದ ಅಂಗಡಿಯಲ್ಲಿ ದರೋಡೆಗೆ ಯತ್ನಿಸಿದ ಆರೋಪಿಗಳ ಪತ್ತೆಗೆ ಇನ್‍ಸ್ಪೆಕ್ಟರ್ ಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಮೊಬೈಲ್ ಲೋಕೆಷನ್, ವಾರದ ಹಿಂದೆ ಅಂಗಡಿಗೆ ಬಂದು ಹೋದವರನ್ನು ವಿಚಾರಣೆ ಮಾಡಲಾಗಿದೆ. 250 ಸಿಸಿ ಕ್ಯಾಮಾರಗಳನ್ನು ಪರಿಶೀಲಿಸಲಾಗಿದ್ದು, ದರೋಡೆ ಯತ್ನ ನಡೆಸಿದವರ ಚಲನ ವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರ ಬಂಧಿಸಲಾಗುವುದು ಎಂದರು.

ದರೋಡೆಗೆ ಯತ್ನಿಸಿದ ಮೂವರು ಆರೋಪಿಗಳು ವೃತ್ತಿಪರ ದರೋಡೆಕೋರರಲ್ಲ. ಕೃತ್ಯಕ್ಕೆ ಆರೋಪಿಗಳು ನಾಡ ಬಂದೂಕನ್ನು ಬಳಸಿದ್ದು, ಅವರಿಗೆ ಬಂದೂಕು ಹಾರಿಸುವುದೂ ತಿಳಿದಂತಿಲ್ಲ. ಆಭರಣ ದರೋಡೆಗೆ ಮಾಡಲೇ ಸಂಚು ಮಾಡಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಈ ಸಂಬಂಧ ವಿವಿಧ ಆಯಾಮಗಳಡಿಯಲ್ಲಿ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗೂ ಹಾಗೂ ಆಭರಣದಂಗಡಿ ಮಾಲಕರ ನಡುವೆ ವೈಷಮ್ಯಗಳೇನಾದರು ಇದ್ದವೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಕೆಲ ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಗರದ ಗ್ರಾಮಾಂತರ ಪೊಲೀಸ್ ಠಾಣೆ, ಅಜ್ಜಂಪುರ ಪಟ್ಟಣದ ಪೊಲೀಸ್ ಠಾಣೆ ಹಾಗೂ ಕಡೂರು ತಾಲೂಕಿನ ಯಗಟಿ ಪೊಲೀಸ್ ಠಾಣೆಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಅಜ್ಜಂಪುರ ಹಾಗೂ ಯಗಟಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್‍ಟೇಬಲ್‍ಗಳಲ್ಲಿ ಕೊರೋನ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಪೊಲೀಸ್ ಠಾಣೆಗಳನ್ನು ಸೀಲ್‍ಡೌನ್ ಮಾಡಿ ಸೋಂಕು ನಿವಾರಕ ಔಷಧ ಸಿಂಪಡಣೆ ಮಾಡಲಾಗಿದೆ. ಈ ಮೂರೂ ಪೊಲೀಸ್ ಠಾಣೆಗಳನ್ನು ಎರಡು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.

ಈ ಪೊಲೀಸ್ ಠಾಣೆಗಳ ಮೂವರು ಸಿಬ್ಬಂದಿಯಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆಯಾದರೂ ಸಿಬ್ಬಂದಿ ಹೊರ ಜಿಲ್ಲೆಗಳಿಗೆ ಹೋಗಿಬಂದಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಪೊಲೀಸರು  ಹೆಚ್ಚಿನ ಸಮಯ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಹಿನ್ನೆಲೆಯಲ್ಲಿ ಸೋಂಕು ತಗುಲಿರಬಹುದು ಎಂದ ಅವರು, ಸೋಂಕಿಗೊಳಗಾಗಿರುವ ಸಿಬ್ಬಂದಿಯನ್ನು ಚಿಕಿತ್ಸೆಗೆ ದಾಖಲಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಸೋಂಕಿತರು ಮತ್ತು ಅವರ ಕುಟುಂಬಸ್ಥರಲ್ಲಿ ಆತ್ಮಸ್ಥೈರ್ಯ ತುಂಬಲು ಮಾನಸಿಕ ತಜ್ಞರಿಂದ ಕೌನ್ಸಲಿಂಗ್ ಮಾಡಿಸಲಾಗುತ್ತಿದೆ ಎಂದರು. 

ಪೊಲೀಸ್ ಇಲಾಖೆ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲದಂತೆ ತಡೆಗಟ್ಟಲು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಚಾರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಕೈಗವಸು, ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ನೀಡಲಾಗಿದೆ. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ವಯಸ್ಸಾದವರು, ಗರ್ಭಿಣಿಯರು, ಸಕ್ಕರೆ ಕಾಯಿಲೆ, ಬಿ.ಪಿ.ಯಂತಹ ಕಾಯಿಲೆಯಿಂದ ಬಳಲುತ್ತಿರುವ ಸಿಬ್ಬಂದಿಗೆ ಸಾರ್ವಜನಿಕ ಸಂಪರ್ಕ ಕಡಿಮೆ ಇರುವ ಮತ್ತು ಹೆಚ್ಚು ಒತ್ತಡವಿಲ್ಲದ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು. 

ಕೊರೋನಾ ಸೋಂಕು ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಸರಕಾರ ನಿರ್ಬಂಧ ವಿಧಿಸಿದೆ. ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವರಿಗೆ 100 ರೂ. ದಂಡ ವಿಧಿಸಲಾಗುತ್ತಿದೆ. ದಿನಕ್ಕೆ 250ರಿಂದ 300 ಮಂದಿಗೆ ದಂಡ ವಿಧಿಸಲಾಗುತ್ತಿದ್ದು, ಕೊರೋನ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಇದೇ ವೇಳೆ ಎಸ್ಪಿ ಅಕ್ಷಯ್ ಮಚ್ಚೀಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News