ಭೀಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ; ಪ್ರವಾಹ ಭೀತಿಯಲ್ಲಿ ನದಿ ತೀರದ ಗ್ರಾಮಸ್ಥರು
ಕಲಬುರ್ಗಿ, ಜು.18: ಕಳೆದ ವರ್ಷ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾ ನದಿ ತೀರದ ಗ್ರಾಮಸ್ಥರಿಗೆ ಇದೀಗ ಪುನಃ ಪ್ರವಾಹದ ಭೀತಿ ಶುರುವಾಗಿದ್ದು, ಗ್ರಾಮಸ್ಥರಿಗೆ ಜಾನುವಾರುಗಳನ್ನು ನದಿ ಕಡೆ ಬಿಡದಂತೆ ಹಾಗೂ ಯಾರೂ ನದಿಗೆ ಇಳಿಯದಂತೆ ಸುರಕ್ಷತೆ ವಹಿಸುವಂತೆ ಕಲಬುರಗಿ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಹಾರಾಷ್ಟ್ರ-ಕರ್ನಾಟಕ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಭೀಮಾ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಹರಿವು ಹೆಚ್ಚಾಗುತ್ತಲೇ ಇದೆ. 3.1 ಟಿಎಂಸಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ.
ಬ್ಯಾರೇಜ್‍ನಿಂದ 4500 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಒಳಹರಿವು ಇರುವಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ, ನದಿ ಪಾತ್ರದ ಗ್ರಾಮಸ್ಥರಿಗೆ ನದಿಗೆ ಇಳಿಯದಂತೆ ಸೂಚಿಸಲಾಗಿದೆ.
ಒಂದು ವೇಳೆ ಮಹಾರಾಷ್ಟ್ರ ಡ್ಯಾಂಗಳಿಂದ ನೀರು ನದಿಗೆ ಹರಿಬಿಟ್ಟರೆ ಅಫಜಲಪುರ ತಾಲೂಕಿನ ಭೀಮಾ ನದಿ ಪಾತ್ರದಲ್ಲಿ ಪುನಃ ಪ್ರವಾಹ ಉಂಟಾಗಲಿದೆ. ಅದರಲ್ಲೂ ಸೊನ್ನ ಬ್ಯಾರೇಜ್ ಕೆಳಬಾಗದ ನದಿ ತಟಕ್ಕೆ ಹೊಂದಿಕೊಂಡಿರುವ ಸುಮಾರು 28 ಗ್ರಾಮಗಳಲ್ಲಿ ಪ್ರವಾಹ ಉಂಟಾಗಲಿದೆ. ಜೊತೆಗೆ ಜೇವರ್ಗಿ ತಾಲೂಕಿನ ಸುಮಾರು 32 ಗ್ರಾಮಗಳಿಗೂ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಪ್ರವಾಹವನ್ನು ಸಮರ್ಪಕವಾಗಿ ಎದುರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಪ್ರವಾಹ ಉಂಟಾಗುವ ಸಾಧ್ಯತೆ ಹಿನ್ನೆಲೆ ಡಿಸಿ ಶರತ್ ಬಿ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ
ಅತೀ ಹೆಚ್ಚು ಪ್ರವಾಹ ಹಾನಿ ಆಗುವ ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ.