ಚೀನಾ ಮೂಲದ ಕಂಪೆನಿಯಿಂದ ಕಳಪೆ ಮಾಸ್ಕ್ ಖರೀದಿ ಆರೋಪ: ಅಧಿಕಾರಿಗಳ ವಿರುದ್ಧ ತನಿಖೆಗೆ ರವಿಕೃಷ್ಣಾ ರೆಡ್ಡಿ ಒತ್ತಾಯ

Update: 2020-07-18 12:59 GMT

ಬೆಂಗಳೂರು, ಜು.18: ಚೀನಾ ಮೂಲದ ಬಿವೈಡಿ ಕಂಪೆನಿಯಿಂದ ಖರೀದಿ ಮಾಡಿರುವ ಮಾಸ್ಕ್ ಗಳು ಕೋವಿಡ್ ಸೋಂಕು ತಡೆಯುವಷ್ಟು ಉತ್ಕೃಷ್ಟವಾಗಿಲ್ಲ. ಹೀಗಾಗಿ ಈ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದ ಅಧಿಕಾರಿಗಳ ವಿರುದ್ದ ಸೂಕ್ತ ತನಿಖೆ ನಡೆಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯ ಸರಕಾರದ ಆರೋಗ್ಯ ಇಲಾಖೆ ಸರಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ಮತ್ತು ಸಿಬ್ಬಂದಿಗಳಿಗೆ ಚೀನಾ ಬಿವೈಡಿ ಇಂಡಿಯಾ ಪ್ರೈ.ಲಿ.ನಿಂದ ಖರೀದಿ ಮಾಡಿದ ಎನ್-95 ಮಾಸ್ಕ್ ಗಳು ನಕಲಿಯಾಗಿದ್ದವು. ಈ ಕಂಪೆನಿಯು ಚೀನಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ತಮಿಳುನಾಡಿನ ಚೆನ್ನೈನಲ್ಲಿ ಘಟಕವನ್ನು ಹೊಂದಿದೆ. ಈ ಕಂಪೆನಿಯ ಮಾಲಕರು ಚೀನಾ ಸರಕಾರದೊಂದಿಗೆ ಸಂಬಂಧವಿದ್ದು, ವಿಶ್ವಾಸಾರ್ಹತೆ ಬಗ್ಗೆ ಸಂದೇಹಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಟೆಂಡರ್ ಪ್ರಕ್ರಿಯೆಯ ನಂತರ ಕಳೆದ ಮಾರ್ಚ್ ನಲ್ಲಿ ಬಿವೈಡಿ ಕಂಪೆನಿಯಿಂದ ಸುಮಾರು 5 ಲಕ್ಷದಷ್ಟು ಎನ್-95 ಮಾಸ್ಕ್ ಖರೀದಿಗೆ ಆದೇಶ ನೀಡಿತ್ತು. ಆದರೆ, ಆ ಕಂಪೆನಿಯು ಎನ್-95 ಬದಲಿಗೆ ಕೆಎನ್-95 ಮಾಸ್ಕ್ ಗಳನ್ನು ಕರ್ನಾಟಕ ಮತ್ತು ತಮಿಳುನಾಡಿನ ಆರೋಗ್ಯ ಇಲಾಖೆಗೆ ಸರಬರಾಜು ಮಾಡಿದೆ. ಆ ಮೂಲಕ ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ವಿಶ್ವಾಸ ದ್ರೋಹ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಎನ್-95 ಹಾಗೂ ಕೆಎನ್-95 ಮಾಸ್ಕ್ ಗಳ ನಡುವೆ ಬಹಳ ವ್ಯತ್ಯಾಸವಿದೆ. ಎನ್-95 ಶ್ರೇಣಿಯ ಮಾಸ್ಕ್ ಗಳು ವೈದ್ಯಕೀಯ ಸಂಬಂಧಿತ ವಿಚಾರಗಳಲ್ಲಿ ಬಳಕೆಗೆ ಯೋಗ್ಯವಾಗಿವೆ. ಆದರೆ, ಕೆಎನ್-95 ಮಾಸ್ಕ್ ಗಳು ಕೇವಲ ಸೂಕ್ಷ್ಮ ದೂಳು ಕಣಗಳಿಂದ ಮಾತ್ರ ರಕ್ಷಣೆ ಒದಗಿಸುತ್ತದೆ. ಕೊರೋನದಂತಹ ವೈರಾಣುವಿನಿಂದ ರಕ್ಷಣೆ ಒದಗಿಸುವುದಿಲ್ಲ. ಈ ವಿಷಯವು ಸ್ವತಃ ಬಿವೈಡಿ ಕಂಪೆನಿಯ ಉತ್ಪನ್ನಗಳ ಕ್ಯಾಟಲಾಗ್‍ನಿಂದ ಸ್ಪಷ್ಟವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸಿಬ್ಬಂದಿಗಳಿಗೆ ಅಪಾರ ಪ್ರಮಾಣದಲ್ಲಿ ಕೋವಿಡ್ ಸೋಂಕು ತಗುಲಿರುವುದಕ್ಕೆ ಚೀನಾ ಮೂಲದ ಬಿವೈಡಿ ಕಂಪೆನಿಯ ಮಾಸ್ಕ್ ಗಳು ಹಾಗೂ ಮಾರುಕಟ್ಟೆಯಲ್ಲಿ ಸಿಗುವ ನಕಲಿ ಮಾಸ್ಕ್ ಗಳನ್ನು ಖರೀದಿಸಿ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ನೀಡಿರುವುದೇ ಪ್ರಮುಖ ಕಾರಣವಾಗಿದೆ.

-ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ

ಒತ್ತಾಯಗಳು

-ಬಿವೈಡಿ ಕಂಪೆನಿಯ ಮಾಸ್ಕ್ ಗಳು ಈಗಲೂ ಸರಕಾರಿ ಆಸ್ಪತ್ರೆಗಳಲ್ಲಿ ಬಳಕೆಯಲ್ಲಿದ್ದರೆ ತಕ್ಷಣವೇ ಬಳಕೆ ಮಾಡದಂತೆ ಸೂಕ್ತ ನಿರ್ದೇಶನ ನೀಡಬೇಕು.

-ಪ್ರಾಮಾಣಿಕ ಅಧಿಕಾರಿಗಳ ನೇತೃತ್ವದಲ್ಲಿ ಮಾತ್ರ ಕೋವಿಡ್ ಪರಿಕರಗಳನ್ನು ಖರೀದಿಸಲು ಮುಂದಾಗಬೇಕು.

-ಕಳಪೆ ಗುಣಮಟ್ಟದ ಔಷಧಿ ಹಾಗೂ ಪರಿಕರಗಳನ್ನು ಸರಬರಾಜು ಮಾಡಿದ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News