×
Ad

ಚಿಕಿತ್ಸೆ ನೀಡದ 2 ಖಾಸಗಿ ಆಸ್ಪತ್ರೆಗಳು: ಅನಾರೋಗ್ಯದಿಂದಿದ್ದ ವ್ಯಕ್ತಿ ಮೃತ್ಯು; ಕುಟುಂಬದ ಆರೋಪ

Update: 2020-07-18 20:45 IST

ಹುಬ್ಬಳ್ಳಿ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲು 2 ಆಸ್ಪತ್ರೆಗಳು ನಿರಾಕರಿಸಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ನಂತರ  ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹುಬ್ಬಳ್ಳಿಯ ಇಸ್ಲಾಮ್ ಪುರದ ಸರ್ಫ್ರಾಝ್ ಜಮ್ಖಾನ 2 ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಶುಕ್ರವಾರ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ ಕುಟುಂಬಸ್ಥರು ಸತ್ತೂರಿನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಆದರೆ ಆಸ್ಪತ್ರೆಯವರು ನಮ್ಮಲ್ಲಿ ಬೆಡ್ ಗಳಿಲ್ಲ, ಕೊರೋನ ಪರೀಕ್ಷೆ ನಡೆಸಬೇಕು ಎಂದಿದ್ದರು. ನಂತರ ಶ್ರೇಯಾ ನಗರದಲ್ಲಿರುವ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಕೊರೋನ ಪರೀಕ್ಷೆಯಿಲ್ಲದೆ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಆಸ್ಪತ್ರೆಯವರು ಕಿಮ್ಸ್ ಗೆ ಒಯ್ಯುವಂತೆ ಹೇಳಿದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ರಾತ್ರಿ 7:40ರ ಸುಮಾರಿಗೆ ಅವರನ್ನು ಮತ್ತೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಸರ್ಫ್ರಾಝ್ ಗೆ ಚಿಕಿತ್ಸೆ ನೀಡಿದ ವೈದ್ಯರು ಚುಚ್ಚುಮದ್ದು ನೀಡಿ , ಆಕ್ಸಿಜನ್ ನಲ್ಲಿಟ್ಟರು ಎಂದು ಅವರ ಸಂಬಂಧಿ ಇಮ್ರಾನ್ ವಿವರಿಸುತ್ತಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಕೊರೋನ ಬಿಕ್ಕಟ್ಟಿನ ಸಮಯದಲ್ಲಿ ಜನಸಾಮಾನ್ಯರು ವೈದ್ಯಕೀಯ ಸೇವೆ ಸಿಗದೆ ಕಂಗಾಲಾಗುತ್ತಿರುವ, ಪ್ರಾಣ ಕಳೆದುಕೊಳ್ಳುತ್ತಿರುವ ಗಂಭೀರ ವಿಷಯದ ಬಗ್ಗೆ ಈ ಘಟನೆ ಬೆಳಕು ಚೆಲ್ಲಿದೆ.

ಈ ಬಗ್ಗೆ ‘ವಾರ್ತಾಭಾರತಿ’ ಜೊತೆ ಮಾತನಾಡಿದ ಧಾರವಾಡ ಡಿಸಿ ನಿತೇಶ್ ಪಾಟಿಲ್, ಈ ಘಟನೆ ದುರದೃಷ್ಟಕರ ಎಂದರು. ಈ ಘಟನೆ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದ ಅವರು, ಶಂಕಿತ ಕೊರೋನ ರೋಗಿಗಳನ್ನು ಆಸ್ಪತ್ರೆಗಳು ಹಿಂದಕ್ಕೆ ಕಳುಹಿಸುವಂತಿಲ್ಲ ಎಂದರು. “ಘಟನೆ ದುರದೃಷ್ಟಕರ, ಅವರಿಗೆ ಕೊರೋನ ಇರಲಿಲ್ಲ ಎಂದೆನಿಸುತ್ತದೆ. ಒಂದು ವೇಳೆ ಇದ್ದರೂ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವಂತಿಲ್ಲ. ಅವರು ಚಿಕಿತ್ಸೆ ನೀಡಲೇಬೇಕು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News