ಇರಾನ್ ನಲ್ಲಿ 3.5 ಕೋಟಿಗೂ ಅಧಿಕ ಮಂದಿಗೆ ಕೊರೋನ ಸೋಂಕಿನ ಸಾಧ್ಯತೆ: ರೂಹಾನಿ

Update: 2020-07-18 17:55 GMT

ಟೆಹರಾನ್, ಜು.18: 3.5 ಕೋಟಿಗೂ ಅಧಿಕ ಇರಾನಿ ಪ್ರಜೆಗಳಿಗೆ ಕೊರೋನ ವೈರಸ್ ಸೋಂಕು ತಗಲಿರುವ ಸಾಧ್ಯತೆಯಿದೆಯೆಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಶನಿವಾರ ತಿಳಿಸಿದ್ದಾರೆ. ಇರಾನ್ ಜನತೆ ಕೊರೋನ ವೈರಸ್ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಸಾಮುದಾಯಿಕವಾಗಿ ಹೊಂದಿಲ್ಲವೆಂದು ಅವರು ಹೇಳಿದ್ದಾರೆ.

 ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆಯನ್ನು ಕಳೆದ ಐದು ತಿಂಗಳುಗಳಿಗಿಂತ ದ್ವಿಗುಣಗೊಳಿಸಲು ಇರಾನ್ ಸಿದ್ಧತೆ ಮಾಡಿಕೊಳ್ಳಬೇಕೆಂದು ರೂಹಾನಿ ಹೇಳಿದ್ದಾರೆ.
 ಇರಾನ್ ನಲ್ಲಿ ಕೋವಿಡ್-19ನ ಹಾವಳಿ ಮತ್ತೆ ತಲೆದೋರಿದ್ದು, ಹೊಸ ಸೋಂಕಿನ ಪ್ರಕರಣಗಳು ಹಾಗೂ ಮೃತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ ಮೇ ತಿಂಗಳಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿತ್ತಾದರೂ ಜೂನ್ ನಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದೆ.
  ಇರಾನ್ ನಲ್ಲಿ ಕಳೆದ 24 ತಾಸುಗಳಲ್ಲಿ 2166 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರಾಚ್ಯದ ರಾಷ್ಟ್ರವಾದ ಇರಾನ್ ನಲ್ಲಿ ಈವರೆಗೆ ಸುಮಾರು 271606 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 13,979 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News