ಮಲೆನಾಡಿನಲ್ಲಿ ಬಿಡುವು ನೀಡಿದ ಮಳೆ: ಭತ್ತ, ಕಾಫಿ, ಅಡಿಕೆ ತೋಟಗಳಲ್ಲಿ ಕೃಷಿ ಕೆಲಸ ಚುರುಕು

Update: 2020-07-19 12:49 GMT

ಚಿಕ್ಕಮಗಳೂರು, ಜು.19: ಕಳೆದ ನಾಲ್ಕು ದಿನಗಳಿಂದ ಕಾಫಿನಾಡಿನಲ್ಲಿ ಧಾರಾಕಾರವಾಗಿ ಸುರಿದ ಮುಂಗಾರ ಮಳೆಯ ಆರ್ಭಟ ರವಿವಾರ ಕೊಂಚ ಕಡಿಮೆಯಾಗಿದೆ. ರವಿವಾರ ಮಲೆನಾಡು ಭಾಗದಲ್ಲಿ ಕೆಲ ಹೊತ್ತು ಮಳೆ ಎಡಬಿಡದೆ ಸುರಿದಿದ್ದು, ಉಳಿದಂತೆ ಆಗಾಗ್ಗೆ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ.

ಜಿಲ್ಲೆಯಲ್ಲಿ ಕಳೆದ ಬುಧವಾರದಿಂದ ಮಂಗಾರು ಮಳೆ ಚುರುಕುಗೊಂಡಿದ್ದು, ಶನಿವಾರದವರೆಗೆ ಮಳೆ ಉತ್ತಮ ಮಳೆಯಾಗಿತ್ತು. ಶನಿವಾರ ರಾತ್ರಿ ಸಾಧಾರಣವಾಗಿ ಸುರಿದ ಮಳೆ ರವಿವಾರ ಬೆಳಗ್ಗೆಯಿಂದ ಸಂಜೆವರೆಗೆ ಜಿಲ್ಲಾದ್ಯಂತ ಕ್ಷೀಣಗೊಂಡಿದೆ. ರವಿವಾರ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೆಲ ಹೊತ್ತು ಧಾರಾಕಾರವಾಗಿ ಸುರಿದ ಮಳೆ ಬಳಿಕ ನಾಪತ್ತೆಯಾಗಿ ಬಿಸಿಲು ಝಳಪಳಿಸಿತು.

ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ರವಿವಾರ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣದೊಂದಿಗೆ ಸೂರ್ಯ ರಶ್ಮಿಗಳು ಧರೆಯ ಕಾವು ಹೆಚ್ಚಿಸಿದ್ದವು. ಮಧ್ಯಾಹ್ನದ ವೇಳೆ ಮಾತ್ರ ಈ ತಾಲೂಕು ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ದಿಢೀರ್ ಮಳೆ ಸುರಿಯಿತು. ಚಿಕ್ಕಮಗಳೂರು ನಗರದಲ್ಲಿ ರವಿವಾರ ಮಧ್ಯಾಹ್ನದ ವೇಳೆ ಮಳೆಯ ಆರ್ಭಟ ಜೋರಾಗಿತ್ತು. ನಂತದ ಇಡೀ ದಿನ ಜಿಲ್ಲೆಯಾದ್ಯಂತ ಮಳೆಯ ಸುಳಿವು ಇರಲಿಲ್ಲ. ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಂತೂ ಬೆಳಗಿನಿಂದ ಸಂಜೆವರೆಗೆ ಬಿಸಿಲ ಕಾವು ಹೆಚ್ಚಿತ್ತು.

ಕಳೆದ ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ಉತ್ತಮ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಮಲೆನಾಡಿನ ಪ್ರಮುಖ ನದಿಗಳಾದ ಹೇಮಾವತಿ, ತುಂಗಾ, ಭದ್ರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಮಲೆನಾಡಿನ ಹಳ್ಳಕೊಳ್ಳಗಳಲ್ಲೂ ನೀರಿನ ಹರಿವು ಹರಿವು ಹೆಚ್ಚಾಗಿದೆ. ಸದ್ಯ ಮಳೆ ಬಿಡುವು ನೀಡಿರುವು ಪರಿಣಾಮ ಇಲ್ಲಿನ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಅಪಾಯದ ಮಟ್ಟಕ್ಕೆ ತಲುಪುವುದು ತಪ್ಪಿದಂತಾಗಿದೆ. ಕಳಸ, ಕುದುರೆಮುಖ ಭಾಗದಲ್ಲಿ ಕಳೆದ 4 ದಿನಗಳ ಕಾಲ ಎಡಬಿಡದೇ ಮಳೆಯಾಗಿದ್ದರಿಂದ ಭದ್ರಾ ನದಿಯಲ್ಲಿ ನೀರು ಹೆಚ್ಚಾಗಿ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಲು ಕೆಲ ಅಡಿಗಳು ಬಾಕಿ ಇತ್ತು. ಆದರೆ ಶನಿವಾರದಿಂದಲೇ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಸೇತುವೆ ಮುಳುಗಡೆಯಾಗುವುದು ತಪ್ಪಿದೆ.

ಸದ್ಯ ಜಿಲಾದ್ಯಂತ ಮಳೆ ಬಿಡುವು ನೀಡಿರುವುದರಿಂದ ಮಲೆನಾಡಿನಲ್ಲಿ ಭತ್ತ, ಅಡಿಕೆ, ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅನುವಾಗಿದೆ. ಮಲೆನಾಡಿನಲ್ಲಿ ಉತ್ತಮ ಮಳೆ ಪರಿಣಾಮ ಕೃಷಿಕರು ಭತ್ತದ ಗದ್ದೆಗಳನ್ನು ನಾಟಿಗೆ ಸಿದ್ಧಗೊಳಿಸುವ ಕೆಲಸಲ್ಲಿ ತಲ್ಲೀನರಾಗಿದ್ದು, ಮಲೆನಾಡಿನಾದ್ಯಂತ ಶೇ.50ರಷ್ಟು ಭತ್ತದ ಗದ್ದೆಗಳನ್ನು ಹದ ಗೊಳಿಸುವ ಕೆಲಸ ಪೂರ್ಣಗೊಂಡಿದ್ದು, ಭತ್ತದ ಸಸಿಮಡಿ ತಯಾರಿಕೆ, ಬದುಗಳ ನಿರ್ಮಾಣ ಕೆಲಸ ಸದ್ಯ ಬಿರುಸಿನಿಂದ ಸಾಗಿದೆ. ಇನ್ನು ಕಾಫಿ ತೋಟಗಳಲ್ಲಿ ಕಳೆ ತೆಗೆಯುವುದು, ಕಸಿ ಕೆಲಸ, ಗೊಬ್ಬರ, ಕೀಟನಾಶಕ ಸಿಂಪಡಣೆಯಂತಹ ಕೃಷಿ ಚಟುವಟಿಕೆಗಳಲ್ಲಿ ಬೆಳೆಗಾರರು ನಿರತರಾಗಿದ್ದರೇ, ಅಡಿಕೆ ತೋಟಗಳಲ್ಲಿ ಬೋರ್ಡೋ ದ್ರಾವಣ ಸಿಂಪಡಣೆ, ಗೊಬ್ಬರ ಹಾಕುವುದು, ಕಳೆ ನಾಶ ಮಾಡುವ ಕೆಲಸ ಚುರುಕುಗೊಂಡಿದೆ.

ಒಟ್ಟಾರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರ ಉತ್ತಮ ಮಳೆಯಾದ ಪರಿಣಾಮ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಸದ್ಯ ಮಳೆ ಬಿಡುವು ನೀಡಿರುವುದರಿಂದ ಕೃಷಿ ಚಟುವಟಿಕೆಗಳನ್ನು ಭರದಿಂದ ಕೈಗೊಳ್ಳಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಉತ್ತಮ ಮಳೆಯಾಗಿದ್ದು, ಮಳೆ ಹೀಗೇ ಬಂದರೆ ಸಾಕು, ಕಳೆದ ಎರಡು ವರ್ಷಗಳಂತೆ ಅತಿವೃಷ್ಟಿಯಾಗಿದೆ. ಅತಿವೃಷ್ಟಿಯಿಂದ ಮನೆ, ಜಮೀನು, ಬೆಳೆಯನ್ನೂ ಕಳೆದುಕೊಂಡಿದ್ದೇವೆ. ಈ ಬಾರಿ ಅತಿವೃಷ್ಟಿ ಆಗದಿದ್ದರೆ ರೈತರು ಬದುಕಬಹುದು ಎಂಬ ಜಿಲ್ಲೆಯ ರೈತರ ಅನಿಸಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News