ಕಲಬುರಗಿ: ವಿದ್ಯುತ್ ತಂತಿಗೆ ಸಿಲುಕಿ ಬಾಲಕ, ಆಕಳು ಸಾವು
ಕಲಬುರಗಿ, ಜು.19: ಶಹಾಬಾದ ತಾಲೂಕಿನ ವ್ಯಾಪ್ತಿಯ ಶಂಕರವಾಡಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 150 ರ ಪಕ್ಕದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಆಕಳು ಮೃತಪಟ್ಟಿದ್ದು, ಆಕಳನ್ನು ಉಳಿಸಲು ಹೋದ ಬಾಲಕನೂ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆಕಳುಗಳನ್ನು ಮೇಯಿಸಲು ಶಂಕರವಾಡಿ ಗ್ರಾಮದ ಬಿರಣ್ಣಾ ಭೀಮಾಶಂಕರ (15) ತೆರಳಿದ್ದಾನೆ. ಈ ಸಂದರ್ಭ ಹೆದ್ದಾರಿ ಪಕ್ಕದ ಕಾರ್ಖಾನೆಯ ಗೋಡೆಯ ಬಳಿ ಆಕಳು ಹೈಟೆನಕ್ಷನ್ ವಿದ್ಯುತ್ ತಂತಿಗೆ ಸಿಲುಕಿದ್ದು, ಆಕಳನ್ನು ಉಳಿಸಿಕೊಳ್ಳಲು ಹೋದ ಬಿರಣ್ಣಾ ವಿದ್ಯುತ್ ತಗುಲಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ಆಕಳು ಕೂಡಾ ಸಾವನ್ನಪ್ಪಿದೆ.
ವಿಷಯ ತಿಳಿದ ಡಿವೈಎಸ್ಪಿ ವೆಂಕಣ್ಣಗೌಡ ಪಾಟೀಲ, ಪಿಐ ಬಿ.ಅಮರೇಶ, ಜೆಸ್ಕಾಂ ಎಇಇ ಸೈಯದ್ ಅನ್ವರ್, ಸೆಕ್ಷನ್ ಅಧಿಕಾರಿ ಸಿದ್ದಪ್ಪ ಹಂಚನಾಳ, ಜೆಸ್ಕಾಂ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ಸ್ಥಳಕ್ಕೆ ಆಗಮಿಸಿದರು. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಒತ್ತಾಯ: ಶಂಕರವಾಡಿ ಗ್ರಾಮದ ಬಾಲಕ ಭೀರಣ್ಣ ವಿದ್ಯುತ್ ತಂತಿಗೆ ಆಕಳು ಸಿಲುಕಿ ಒದ್ದಾಡುತ್ತಿರುವುದನ್ನು ಗಮನಿಸಿ, ಉಳಿಸಲು ಹೋಗಿ ತಾನೂ ಬಲಿಯಾಗಿದ್ದಾನೆ. ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಬಾಲಕ ಹಾಗೂ ಆಕಳ ಸಾವು ಸಂಭವಿಸಿದ್ದು, ಮೃತ ಬಾಲಕನ ಮನೆಯವರಿಗೆ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಮುಖಂಡ ರಾಜೇಶ ಯನಗುಂಟಿಕರ್, ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ ಆಗ್ರಹಿಸಿದ್ದಾರೆ.