ಆಯುಷ್ ವೈದ್ಯರ ರಾಜೀನಾಮೆ: ಚಿಕಿತ್ಸೆಗಾಗಿ ರೋಗಿಗಳ ಪರದಾಟ
ಧಾರವಾಡ, ಜು.19: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸರಕಾರಿ ಪ್ರಾಥಮಿಕ ಕೇಂದ್ರಗಳ ಗುತ್ತಿಗೆ ಆಯುಷ್ ವೈದ್ಯರು ಸೇವಾ ಭದ್ರತೆಗೆ ಆಗ್ರಹಿಸಿ ರಾಜೀನಾಮೆ ನೀಡಿ ಸೇವೆ ಸ್ಥಗಿತಗೊಳಿಸಿರುವ ಬೆನ್ನಲ್ಲೇ ಗ್ರಾಮೀಣ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಹ ಪರಿಸ್ಥಿತಿ ಉದ್ಭವಿಸಿದೆ.
ಕಲಘಟಗಿ ತಾಲೂಕಿನ ಮುಕ್ಕಲ, ಗಂಜಿಗಟ್ಟಿ, ಕಲಘಟಗಿ, ಬಮ್ಮಿಗಟ್ಟಿ, ಗಳಗಿ ಹುಲಕೊಪ್ಪ, ತಬಕದಹೊನ್ನಿಹಳ್ಳಿ, ಮಿಶ್ರಿಕೋಟಿ, ದಮ್ಮವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಯುಷ್ ವೈದ್ಯರು ಸೇವೆ ಸ್ಥಗಿತಗೊಳಿಸಿದ್ದು, ಗ್ರಾಮೀಣ ಬಡ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಅಲ್ಲದೆ, ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೇ ದೂರದ ಕಲಘಟಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೋಗಬೇಕಾಗಿದೆ.
ಕೊರೋನ ಸಮಸ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ವೈದ್ಯರಿಲ್ಲದೇ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಬರುವ ರೋಗಿಗಳು ಕಂಗಾಲಾಗಿದ್ದಾರೆ. ಸರಕಾರ ಶೀಘ್ರವೇ ಆಯುಷ್ ವೈದ್ಯರ ಬೇಡಿಕೆ ಈಡೇರಿಸಿ ಸೇವೆಗೆ ಅನುಕೂಲ ಮಾಡಿದಲ್ಲಿ ಸಹಕಾರಿಯಾಗಲಿದೆ ಎಂದು ಮುಕ್ಕಲ ಗ್ರಾಪಂ ಸದಸ್ಯ ಸುಭಾಷಗೌಡ ಪಾಟೀಲ್ ಹೇಳಿದ್ದಾರೆ.