×
Ad

ಮಡಿಕೇರಿ: ಕಾಡಾನೆ ನಿಯಂತ್ರಿಸಲು ‘ಕಾವಲು ಮನೆ’; ಆರ್.ಆರ್.ಟಿ ತಂಡದಿಂದ ನಿತ್ಯ ಕಾವಲು

Update: 2020-07-19 19:37 IST

ಮಡಿಕೇರಿ, ಜು.19 : ಚೆಟ್ಟಳ್ಳಿ ಸಮೀಪದ ಮೀನುಕೊಲ್ಲಿ ಮೀಸಲು ಅರಣ್ಯದಿಂದ ರಾತ್ರಿಯಾದಂತೆ ಕಾಡಾನೆಗಳ ಹಿಂಡು ಅರಣ್ಯದಾಟಿ ಬರುತ್ತಿವೆ. ಇದನ್ನು ನಿಯಂತ್ರಿಸಲು ‘ಕಾವಲು ಮನೆ’ಯನ್ನು ನಿರ್ಮಿಸಲಾಗಿದೆ.

ಆರ್ ಆರ್ ಟಿಟಿ ತಂಡ ಹಾಗು ಅರಣ್ಯ ಸಿಬ್ಬಂದಿಗಳು ಹಲವು ವರ್ಷಗಳ ಹಿಂದೆ ಎತ್ತರದ ಮರವೊಂದರ ಮೇಲೆ ಅಟ್ಟಣಿಗೆಯನ್ನು ಕಟ್ಟಿ ಕಾವಲು ಕಾದು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದರು. ಜೊತೆಗೆ ಅರಣ್ಯ ಇಲಾಖೆ ಆನೆ ಗೇಟನ್ನು ನಿರ್ಮಿಸಿ ಆನೆಗೆ ತಡೆ ಒಡ್ಡಲಾಯಿತು. ನಡು ರಾತ್ರಿಯಲ್ಲಿ ಕಾಡಾನೆ ಸದ್ದು ಕೇಳಲೆಂದು ಆನೆದಾಟುವ ಜಾಗದಲ್ಲಿ ತಂತಿಕಟ್ಟಿ ಬಾಟಲಿಗಳನ್ನು ನೇತುಹಾಕಲಾಗಿದೆ. 

ಕಳೆದ ಕೆಲ ತಿಂಗಳ ಅವಧಿಯಲ್ಲಿ ಅಟ್ಟಣಿಗೆ ಕಟ್ಟಲಾಗಿದ್ದ ಮರವು ಒಣಗತೊಡಗಿದ ಪರಿಣಾಮ ಅಟ್ಟಣಿಗೆ ಮೇಲೇರಲಾರದೆ ಅರಣ್ಯ ಸಿಬ್ಬಂದಿಗಳು ಅರಣ್ಯ ಮೂಲೆಯಲ್ಲೋ, ಮರದ ಕೆಳಗೋ ಕಾಡಾನೆಗಳನ್ನು ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ 5-6 ತಿಂಗಳ ಹಿಂದೆ ಅರಣ್ಯ ಇಲಾಖೆಯ ಪ್ರಸ್ತಾವನೆಯಂತೆ ಕಾಡಾನೆ ದಾಟುವ ಜಾಗದಲ್ಲಿ ಆನೆ ಕಾವಲು ಮನೆ ಹಾಗು ಕಂಡಕರೆ ಕಳ್ಳಬೇಟೆ ತಡೆ ಶಿಬಿರವನ್ನು ನಿರ್ಮಾಣ ಮಾಡಲಾಯಿತು.

ಕಳೆದ ಜುಲೈ3 ರಂದು ಕುಶಾಲನಗರ ವಲಯದ ದುಬಾರೆ ಆನೆ ಶಿಬಿರದಲ್ಲಿ ನವೀಕರಣಗೊಂಡ ಆನೆಮಹಲ್ ವಿಶ್ರಾಂತಿ ಗೃಹ, ವನ್ಯಜೀವಿ ಚಿಕಿತ್ಸಾ ಕೇಂದ್ರ, ಆನೆ ಮಾವುತರ ಹಾಗೂ ಕಾವಾಡಿಗಳ ವಸತಿ ಗೃಹ, ಕಾವೇರಿ ನಿಸರ್ಗ ಧಾಮದದಲ್ಲಿ ನಿರ್ಮಾಣವಾದ ನೂತನ ಕುಟಿರ, ಮೆಟ್ನಲ್ಲಿ ಕಳ್ಳಬೇಟೆ ಶಿಬಿರವನ್ನು ಶಾಸಕರಾದ ಅಪ್ಪಚ್ಚುರಂಜನ್ ಹಾಗು ಅರಣ್ಯ ಇಲಾಖೆಯ ಮೇಲಧಿಕಾರಿಗಳು ಉದ್ಘಾಟಿಸಿದರೆ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಕಂಡಕರೆ ವ್ಯಾಪ್ತಿಯಲ್ಲಿ ಕಾಡಾನೆ ಕಾವಲು ಮನೆ ಹಾಗು ಕಂಡಕರೆ ಕಳ್ಳಬೇಟೆ ಶಿಬಿರವನ್ನು ಅರಣ್ಯ ಇಲಾಖಾ ಮೇಲಧಿಕಾರಿಗಳು ಉದ್ಘಾಟಿಸಿದರು.

ಈ ಕಟ್ಟಡದಲ್ಲಿ ನೇಮಕ ಮಾಡಲಾದ ಆರ್ ಆರ್ ಟಿ ತಂಡ ನಿತ್ಯವೂ ಕಾವಲು ಕಾಯುತ್ತಿದೆ. ಈ ಕಟ್ಟಡ ಉದ್ಘಾಟನೆಗೊಂಡರು ವಿದ್ಯುತ್‍ ಸಂಪರ್ಕ ಇಲ್ಲದೆ ಸಿಬ್ಬಂದಿಗಳು ಮೇಣದಬತ್ತಿ ಉರಿಸಿಕೊಂಡಿರಬೇಕಾದ ಪರಿಸ್ಥಿತಿ ಒಂದೆಡೆಯಾಗಿದೆ. ನಿತ್ಯವೂ ಓಡಾಡುವ ಕಾಡಾನೆಗಳನ್ನು ಓಡಿಸಲು ಪ್ಲಾಸ್ಟಿಕ್ ಪೈಪಿನಲ್ಲಿ ತಯಾರಿಸಿದ ಯಂತ್ರದ ಮೂಲಕ ಸಿಡಿಯುವ ಸದ್ದುಮಾಡಿ ಕಾಡಾನೆಗಳನ್ನು ಕಾಡಿಗೆ ಓಡಿಸುತ್ತಿದ್ದಾರೆ. ನಡುರಾತ್ರಿ ಕಾಡಾನೆಗಳು ನೂತನ ಕಟ್ಟಡದ ಸುತ್ತಲೂ ಸುಳಿದಾಡುತ್ತಿದ್ದು, ಕಾಡಾನೆಗಳಿಂದ ಕಟ್ಟಡಕ್ಕೆ ಅಪಾಯವಾಗುವ ಸಂಭವವಿದೆ. ಕಟ್ಟಡದ ಸುತ್ತಲೂ ಆನೆಕಂದಕ ನಿರ್ಮಿಸಿ ಕಟ್ಟಡವನ್ನು ಮೊದಲು ರಕ್ಷಿಸಬೇಕಿದೆ ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News