ಮಡಿಕೇರಿ: ಬಾಳೆ ಹಣ್ಣಿಗೆ ವಿಷ ಬೆರೆಸಿ 15ಕ್ಕೂ ಹೆಚ್ಚು ಹಸುಗಳನ್ನು ಕೊಂದ ದುಷ್ಕರ್ಮಿಗಳು
Update: 2020-07-19 21:21 IST
ಮಡಿಕೇರಿ, ಜು.19: ತೋಟವನ್ನು ಪ್ರವೇಶಿಸಿದ 15ಕ್ಕೂ ಹೆಚ್ಚು ಹಸುಗಳನ್ನು ವಿಷ ಹಾಕಿ ಕೊಂದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದ ಡಿಬಿಡಿ ಟಾಟಾ ಎಸ್ಟೇಟ್‍ನಲ್ಲಿ ನಡೆದಿದೆ.
ಸ್ಥಳೀಯ ಗ್ರಾಮಸ್ಥರ ಹಸುಗಳು ತೋಟಕ್ಕೆ ನುಸುಳಿ ಹಾನಿ ಉಂಟು ಮಾಡುತ್ತಿದ್ದವೆಂದು ಬಾಳೆಹಣ್ಣಿಗೆ ವಿಷ ಬೆರೆಸಿ ಹಸುಗಳನ್ನು ಕೊಲ್ಲಲಾಗಿದೆ ಎನ್ನಲಾಗಿದೆ. ಹಸುಗಳ ಮೃತದೇಹವನ್ನು ಯಾರಿಗೂ ಅನುಮಾನ ಬಾರದಂತೆ ಎಸ್ಟೇಟ್ ಒಳಗಿನ ದೊಡ್ಡ ಕಂದಕಕ್ಕೆ ಹಾಕಿ ಮರಗಳನ್ನು ಕಡಿದು ಹಾಕಿದ್ದಾರೆ. ಗ್ರಾಮಸ್ಥರು ನಾಪತ್ತೆಯಾಗಿದ್ದ ಹಸುಗಳನ್ನು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಎಸ್ಟೇಟ್ ಆಡಳಿತ ಮಂಡಳಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಸುಗಳ ಮಾಲಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.