ಕೊರೋನ ಸೋಂಕಿನ ಹೆಸರಲ್ಲಿ ನಡೆಯುತ್ತಿರುವ ರುದ್ರ ನಾಟಕ !

Update: 2020-07-20 06:02 GMT

ದೃಶ್ಯ-1

ಒಂದು ತಿಂಗಳ ಮಗು ಅದು. ಏಕಾಏಕಿ ಜ್ವರ ಕಾಣಿಸಿಕೊಂಡಿತು. ಉಸಿರಾಟದ ತೊಂದರೆಯೂ ಎದುರಾಯಿತು. ತಂದೆಯಾದವನು ಆ ಮಗುವಿನ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯ ತೊಡಗಿದ. ಆದರೆ ಯಾವುದೇ ಆಸ್ಪತ್ರೆಗಳು ಸೂಕ್ತವಾಗಿ ಸ್ಪಂದಿಸಲಿಲ್ಲ. ಅಂತಿಮವಾಗಿ ಆ ಮಗು ಸಾವಿಗೀಡಾಗಬೇಕಾಯಿತು. ಆ ಮಗುವಿಗೆ ಕೊರೋನ ಇತ್ತೋ, ಇಲ್ಲವೋ, ಆದರೂ ಕೊರೋನದ ಹೆಸರಲ್ಲೇ ಆ ಮಗುವನ್ನು ನಮ್ಮ ಆಸ್ಪತ್ರೆಗಳು ಬಲಿ ಪಡೆದವು. ತನ್ನ ಮಗುವಿಗೆ ಆದ ಅನ್ಯಾಯ ಇನ್ನಾವ ಮಗುವಿಗೂ ಆಗಬಾರದು ಎನ್ನುವ ಕಾರಣಕ್ಕಾಗಿ ಮಗುವಿನ ತಂದೆ, ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಮುಂದಾಗುತ್ತಾರೆೆ. ಈಗ ಕಾನೂನು ವ್ಯವಸ್ಥೆ ಜಾಗರೂಕವಾಗುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಅವಕಾಶವಿಲ್ಲದೇ ಇರುವುದರಿಂದ ಸಂತ್ರಸ್ತ ತಂದೆಯನ್ನು ಪೊಲೀಸರು ಬಂಧಿಸುತ್ತಾರೆ.

ದೃಶ್ಯ-2

ಬೆಂಗಳೂರಿನ ವಿವಿಪುರಂನಲ್ಲಿ ನೆಲೆಸಿರುವ ಕುಟುಂಬದ ಕತೆಯಿದು. ಕುಟುಂಬದ ಮೂವರು ಸದಸ್ಯರಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಕುಟುಂಬ ಜು. 14ರಿಂದ ಸತತವಾಗಿ ಕೋವಿಡ್ ಸಹಾಯವಾಣಿಯನ್ನು ಸಂಪರ್ಕಿಸಿತ್ತು. ಆದರೆ ಯಾವುದೇ ನೆರವು ದೊರಕಿಲ್ಲ. ಮಹಿಳೆಯ ಸ್ಥಿತಿ ತೀರಾ ಗಂಭೀರವಾಗಿದೆಯೆಂದರೂ ಸುಮಾರು ನಾಲ್ಕು ದಿನ ಯಾವುದೇ ಸಹಾಯ ದೊರಕಲಿಲ್ಲ. ಪರಿಣಾಮವಾಗಿ ಮಹಿಳೆ ತನ್ನ ಮನೆಯಲ್ಲೇ ಪ್ರಾಣ ಬಿಡಬೇಕಾಯಿತು. ಬೆಂಗಳೂರಿನ ಇನ್ನೊಂದು ಕುಟುಂಬದ ಕತೆ ಇದಕ್ಕಿಂತ ಭೀಕರವಾಗಿದೆ. ಪತಿಗೆ ಉಸಿರಾಟದ ತೊಂದರೆ. ಪತ್ನಿಯೇ ಪತಿಯನ್ನು ಆಟೊರಿಕ್ಷಾದಲ್ಲಿ ಕರೆದುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಯಾರೂ ರೋಗಿಯನ್ನು ಸೇರಿಸಿಕೊಂಡಿಲ್ಲ. ಕಾರಣವೇನು ಎಂದು ಕೇಳಿದರೆ, ಮತ್ತೆ ಅದೇ ಕೊರೋನ! ವಿಕ್ಟೋರಿಯಾ ಆಸ್ಪತ್ರೆಯಲ್ಲಿ ‘‘ಕೊರೋನ ರೋಗಿಗಳಿಗೆ ಮಾತ್ರ ಪ್ರವೇಶ’’ ಎಂಬ ಉತ್ತರ ಸಿಕ್ಕಿದೆ. ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಪಡೆದು ಆಸ್ಪತ್ರೆಯಿಂದ ಆಸ್ಪತ್ರೆಗೆ ತನ್ನ ಪತಿಯನ್ನು ಉಳಿಸಲು ಮಹಿಳೆ ಅಲೆದಾಡುತ್ತಿರುವ ವೀಡಿಯೊ ವೈರಲ್ ಆಗಿದೆ.

ದೃಶ್ಯ-3

 ಈ ನಾಟಕ ಪ್ರದರ್ಶನಗೊಂಡಿರುವುದು ಬೆಳಗಾವಿಯಲ್ಲೇ ಆಗಿದ್ದರೂ ಇದರ ಬೇರೆ ಬೇರೆ ಆವೃತ್ತಿಗಳು ರಾಜ್ಯದ ಹಲವೆಡೆಗಳಲ್ಲಿ ಪ್ರದರ್ಶನಗೊಂಡಿವೆ ಎನ್ನುವ ಅಂಶವನ್ನು ನಾವು ಮರೆಯಬಾರದು.ಅಥಣಿ ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲಿದುಕೊಂಡು ಜೀವನ ಸಾಗಿಸುತ್ತಿದ್ದ ಸದಾಶಿವ ಹಿರಟ್ಟಿ ಎಂಬವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ ಕೊರೋನ ಭಯದಿಂದ ಯಾವುದೇ ಸಂಬಂಧಿಕರು ಇವರ ಶವ ಸಂಸ್ಕಾರದಲ್ಲಿ ಭಾಗವಹಿಸಲಿಲ್ಲ. ಕಟ್ಟಕಡೆಗೆ ತನ್ನ ಮಗನ ಜೊತೆಗೆ ಮೃತರ ಪತ್ನಿಯೇ ತಳ್ಳುವ ಗಾಡಿಯಲ್ಲಿ ಪತಿಯ ಮೃತದೇಹವನ್ನು ಸಾಗಿಸಬೇಕಾಯಿತು. ಈ ಅಮಾನವೀಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಳಿಕ ವೈರಲ್ ಆಯಿತು.

ದೃಶ್ಯ-4

ಬುದ್ಧಿವಂತರ ಜಿಲ್ಲೆಯೆಂದು ಗುರುತಿಸಲ್ಪಟ್ಟ ಮಂಗಳೂರಿನಲ್ಲಿನ ಖ್ಯಾತ ಆಸ್ಪತ್ರೆಯಲ್ಲಿ ನಡೆದ ಘಟನೆಯಿದು. ತುಂಬು ಗರ್ಭಿಣಿಯೊಬ್ಬಳು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾದರು. ಅಲ್ಲಿ ಮೊದಲು ಆಕೆಯ ‘ಕೊರೋನ ಪರೀಕ್ಷೆ’ ಮಾಡಲಾಯಿತು. ಫಲಿತಾಂಶ ಪಾಸಿಟಿವ್. ಅಷ್ಟೇ, ವೈದ್ಯರೂ ಸೇರಿದಂತೆ ಸಿಬ್ಬಂದಿ ಭೂತ ಕಂಡವರಂತೆ ಬೆಚ್ಚಿದರು. ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಅಂತಿಮವಾಗಿ ವಿವಿಧ ರಾಜಕೀಯ ನಾಯಕರ ಮಧ್ಯ ಪ್ರವೇಶದಿಂದ ಗರ್ಭಿಣಿ ಬೇರೆ ಆಸ್ಪತ್ರೆಯ ಮೊರೆ ಹೋಗಬೇಕಾಯಿತು. ಈ ಆಸ್ಪತ್ರೆಯಲ್ಲಿ ತಿರಸ್ಕರಿಸಲ್ಪಟ್ಟ ಮಹಿಳೆ ಆ ಆಸ್ಪತ್ರೆಯಲ್ಲಿ ಸ್ವೀಕೃತರಾದರು.

ದೃಶ್ಯ-5

ಬೆಂಗಳೂರಿನ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ನಡೆದ ರುದ್ರ ನಾಟಕವಿದು. ವಾರದ ಹಿಂದೆ 60 ವರ್ಷದ ಮಹಿಳೆಯೊಬ್ಬಳನ್ನು ಕೊರೋನ ಹೆಸರಲ್ಲಿ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೈಕೆ ಮಾಡುವವರೇ ಇಲ್ಲದ ಸ್ಥಿತಿ ಆಕೆಯದು. ಕುಟುಂಬದವರ ಪತ್ತೆಯೂ ಇಲ್ಲ. ಭಯ, ಆತಂಕ, ಖಿನ್ನತೆಗೆ ಜಾರಿದ ಮಹಿಳೆ, ಜುಲೈ 17ರಂದು ಆಸ್ಪತ್ರೆಯ ಸ್ನಾನದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಇದೇ ಆಸ್ಪತ್ರೆಯಲ್ಲಿ ಎರಡು ವಾರಗಳ ಹಿಂದೆ ಇನ್ನೊಬ್ಬ ಸೋಂಕಿತ ಮಹಿಳೆಯೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಹಾಗೆ, ಮಾಧ್ಯಮಗಳು ಈ ಸಾವನ್ನು ಕೊರೋನ ತಲೆಗೆ ಕಟ್ಟಿದವೋ ಅಥವಾ ವೈದ್ಯರ ತಲೆಗೆ ಕಟ್ಟಿದವೋ ಇನ್ನೂ ಬೆಳಕಿಗೆ ಬಂದಿಲ್ಲ. ಕೊರೋನ ಕಾಲಾವಧಿಯಲ್ಲಿ ಸೋಂಕಿತರಲ್ಲದವರೂ ಆತ್ಮಹತ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಆದರೆ ಸೋಂಕಿತರಷ್ಟೇ ಮಾಧ್ಯಮಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ.

ದೃಶ್ಯ-6

ಇದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದ ಘಟನೆ. ಕೊರೋನ ಹಿನ್ನೆಲೆಯಲ್ಲಿ 65 ವರ್ಷದ ಹಿರಿಯರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬೆಡ್ ಕೊರತೆಯಿಂದಾಗಿ ಇವರನ್ನು ನೆಲದ ಮೇಲೆಯೇ ಮಲಗಿಸಲಾಗಿತ್ತು. ಇವರು ಹೊಟ್ಟೆ ನೋವಿನಿಂದ ನೆಲದ ಮೇಲೆ ಬೆತ್ತಲಾಗಿ ಒದ್ದಾಡುತ್ತಿರುವುದು ವೀಡಿಯೊಗಳ ಮೂಲಕ ವೈರಲ್ ಆಯಿತು. ಇದಾದ ಬಳಿಕ ಈತನಿಗೆ ಚಿಕಿತ್ಸೆ ನೀಡಲಾಯಿತು ಎಂದು ಆಸ್ಪತ್ರೆಯ ಮೂಲಗಳು ಹೇಳುತ್ತಿವೆ. ಆದರೆ ಶುಕ್ರವಾರ ಇವರು ಮೃತಪಟ್ಟಿದ್ದಾರೆ.

****

ಕೊರೋನ ಸಾಂಕ್ರಾಮಿಕ ರೋಗಕ್ಕೆ ಇನ್ನೂ ಔಷಧಿ ಕಂಡು ಹುಡುಕಿಲ್ಲ ಎಂದು ಎಲ್ಲ ತಜ್ಞರೂ ಹೇಳುತ್ತಿದ್ದಾರೆ. ಆದರೆ 6 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರು ಈ ದೇಶದಲ್ಲಿ ಕೊರೋನದಿಂದ ಚೇತರಿಸಿಕೊಂಡಿದ್ದಾರೆ. ಆರೋಗ್ಯವಂತರಾಗಿ ನಮ್ಮ ನಡುವೆ ಇದ್ದಾರೆ. ಹಾಗಾದರೆ ಇವರೆಲ್ಲ ಚೇತರಿಕೆಗೊಂಡಿರುವುದು ಯಾವ ಔಷಧಿಯಿಂದ? ಅಂದರೆ ಔಷಧಿಯಿಲ್ಲದೆಯೇ ಕೊರೋನ ಸೋಂಕಿತರು ಚೇತರಿಕೆಗೊಳ್ಳುತ್ತಾರೆ ಎಂದಾಯಿತು. ಸರಕಾರವೇ ಹೇಳುವಂತೆ ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆ ಪ್ರಕರಣಗಳು ಅಧಿಕವಾಗಿವೆ. ಸೋಂಕಿತರನ್ನು ಕ್ವಾರಂಟೈನ್ ಹೆಸರಿನಲ್ಲಿ ತಮ್ಮದೇ ಗೃಹ ಬಂಧನದಲ್ಲಿರಿಸುವ ಆಸ್ಪತ್ರೆಗಳು ಆ ಅವಧಿಯಲ್ಲಿ ಇವರಿಗೆ ನೀಡುವ ಔಷಧಿಗಳು ಯಾವುವು? ಒಂದು ಮೂಲದ ಪ್ರಕಾರ ಔಷಧಿಯಿರಲಿ, ಕ್ವಾರಂಟೈನ್‌ಗೊಳಗಾದ ರೋಗಿಗಳಿಗೆ ಬಿಸಿ ನೀರನ್ನೂ ಆಸ್ಪತ್ರೆಗಳು ಒದಗಿಸುತ್ತಿಲ್ಲ ಎಂಬ ಆರೋಪಗಳಿವೆ. ಆಸ್ಪತ್ರೆಗಳ ಈ ಬಲವಂತದ ಕ್ವಾರಂಟೈನ್‌ಗಳೇ ಜನರನ್ನು ಅಪಾಯಕ್ಕೆ ತಳ್ಳುತ್ತಿವೆ, ಆತ್ಮಹತ್ಯೆಯಂತಹ ಸನ್ನಿವೇಶಗಳಿಗೆ ದೂಡುತ್ತಿವೆ ಎನ್ನುವುದು ಕೇಳಿ ಬರುತ್ತಿರುವ ಆರೋಪಗಳಾಗಿವೆ.

 ಇಂದು ಈ ದೇಶದಲ್ಲಿ ಕೊರೋನ ಸೋಂಕಿತರಿಗಿಂತ, ಇನ್ನಿತರ ರೋಗಗಳಿಂದ ನರಳುವವರಿಗೆ ಮುತುವರ್ಜಿಯಿಂದ ಚಿಕಿತ್ಸೆ ನೀಡುವ ಅಗತ್ಯವಿದೆ. ಈ ಮೂಲಕ, ಸಾವಿನ ಸಂಖ್ಯೆಯನ್ನು ಅರ್ಧಕ್ಕರ್ಧ ಇಳಿಸಬಹುದಾಗಿದೆ. ಕನಿಷ್ಠ ರೋಗ ಲಕ್ಷಣಗಳಿಲ್ಲದ ಕೊರೋನ ಸೋಂಕಿತರನ್ನು ಅವರವರ ಮನೆಯಲ್ಲೇ ಕ್ವಾರಂಟೈನ್ ಅನುಭವಿಸಲು ಆಸ್ಪತ್ರೆಗಳು ಅನುಮತಿಸಬೇಕಾಗಿದೆ. ಟಿಬಿ, ಎಚ್‌ಐವಿಯಂತಹ ಮಾರಕ ರೋಗಿಗಳ ಕುರಿತಂತೆ ಕಾಳಜಿಯಿಲ್ಲದ ಆಸ್ಪತ್ರೆಗಳು ಕೊರೋನ ಪಾಸಿಟಿವ್ ಎಂದಾಕ್ಷಣ ಮೈಮೇಲೆ ಬೀಳುವುದಾದರೂ ಯಾಕೆ? ಇತರ ರೋಗಗಳ ಹೆಸರಲ್ಲಿ ಚಿಕಿತ್ಸೆಗೆ ಬಂದವರನ್ನು ಆಯಾ ರೋಗಗಳಿಗೆ ಸಂಬಂಧಿಸಿಯೇ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕಾಗಿದೆ. ಬದಲಿಗೆ ಕೊರೋನ ಹೆಸರಲ್ಲಿ ಅವರನ್ನು ಇನ್ನಷ್ಟು ಅಪಾಯಕ್ಕೆ ತಳ್ಳುವುದನ್ನು, ಅವರನ್ನು ದೋಚುವುದನ್ನು ನಿಲ್ಲಿಸಬೇಕು. ಮೊತ್ತ ಮೊದಲು ಆಸ್ಪತ್ರೆಯ ಸಿಬ್ಬಂದಿಯನ್ನು ಕೊರೋನ ಕುರಿತು ಜಾಗೃತಿಗೊಳಿಸಬೇಕಾಗಿದೆ. ಅವರ ಜೊತೆ ಜೊತೆಗೆ ಸಮಾಜವನ್ನು ಎಚ್ಚರಿಸಬೇಕು. ಕೊರೋನವನ್ನು ಆಸ್ಪತ್ರೆಗಳು ಭೂತಕನ್ನಡಿಯಲ್ಲಿ ತೋರಿಸುತ್ತಿರುವ ಪರಿಣಾಮವಾಗಿಯೇ, ಅದು ಮನುಷ್ಯರನ್ನು ದೈಹಿಕವಾಗಿ ಕಾಡುವುದಕ್ಕಿಂತ ಮಾನಸಿಕವಾಗಿ ಹೆಚ್ಚು ಕಾಡತೊಡಗಿದೆ. ಹೀಗೆ ಮುಂದುವರಿದರೆ ಕೊರೋನ ಹೆಸರಲ್ಲಿ ಮನುಷ್ಯ ನಿಧಾನಕ್ಕೆ ಹಾಲಿವುಡ್ ಸಿನೆಮಾಗಳಲ್ಲಿ ಬರುವ ‘ರೆಂಬಿ’ಯಾಗಿ ಬದಲಾಗುವ ಎಲ್ಲ ಅಪಾಯಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News