ಸಂಪೂರ್ಣ ಲಾಕ್‌ಡೌನ್ ಜೊತೆ ಸಾರ್ವತ್ರಿಕ ಪರೀಕ್ಷೆಯೂ ನಡೆಯಲಿ: ಯುನಿವೆಫ್ ಕರ್ನಾಟಕ
ಮಂಗಳೂರು, ಜು.20: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಆ ಪಟ್ಟಿಯಲ್ಲಿ ದ.ಕ.ಜಿಲ್ಲೆಯೂ ಪ್ರಮುಖವಾಗಿದೆ. ಇದನ್ನು ಮನಗಂಡು ಮುಖ್ಯಮಂತ್ರಿಯ ಆದೇಶದಂತೆ ಜಿಲ್ಲಾಡಳಿತ ಒಂದು ವಾರದ ಕಾಲ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಿದೆ. ಇದು ಯಾವುದೇ ಒತ್ತಡಕ್ಕೆ ಮಣಿದು ಮಾಡುವ ಲಾಕ್‌ಡೌನ್ ಆಗಿರದೆ ಸರ್ವ ಸಂಪೂರ್ಣ ಲಾಕ್‌ಡೌನ್ ಆಗಬೇಕು. ಹಾಲು ಮತ್ತು ಔಷಧ ಬಿಟ್ಟರೆ ಮಾಂಸ, ಮೀನು ಮತ್ತು ತರಕಾರಿ ಮಾರುಕಟ್ಟೆಯ ಸಹಿತ ಎಲ್ಲ ಅಂಗಡಿಗಳನ್ಮು ಕಡ್ಡಾಯವಾಗಿ ಮುಚ್ಚಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಆಗ್ರಹಿಸಿದ್ದಾರೆ.
ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಸೋಂಕು ಅಧಿಕಗೊಳ್ಳಲು ಸಾಧ್ಯವಿರುವ ಎಲ್ಲ ವ್ಯವಹಾರಗಳನ್ನು ಜನರಿಗೆ ಕಷ್ಟವಾದರೂ ಸರಿ, ಮುಚ್ಚಿಸಬೇಕಾಗಿದೆ, ರೋಗ ನಿರ್ಮೂಲನೆಯ ಎಲ್ಲ ಸಾಧ್ಯತೆಯನ್ನು ಪರಿಶೀಲಿಸಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಮಾಡಿದಂತೆ ಸಾರ್ವತ್ರಿಕ ಪರಿಶೀಲನೆಯ ವ್ಯವಸ್ಥೆಯನ್ನು ಕೈಗೊಳ್ಳಬೇಕು.ಅದು ಅಸಾಧ್ಯವಾದರೆ ಕನಿಷ್ಟ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವ ಹಾಗು ವ್ಯಾಪಾರಿಗಳ ಕೋವಿಡ್ ಪರೀಕ್ಷೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಯುನಿವೆಫ್ ಕರ್ನಾಟಕ ಜಿಲ್ಲಾಡಳಿತವನ್ನು ಆಗ್ರಹಿಸಿದೆ.