ಜಾರ್ಖಂಡ್‌ನಲ್ಲಿ ಗುಂಪು ಹಲ್ಲೆಯಿಂದ ಸಾವು: ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ

Update: 2020-07-20 14:31 GMT

ಬೆಂಗಳೂರು, ಜು.18: ಜಾರ್ಖಂಡ್‌ನಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ಗುಂಪು ಹಲ್ಲೆಗೊಳಗಾಗಿ ಮೃತಪಟ್ಟ ಯುವಕ ತಬ್ರೇಝ್ ಅನ್ಸಾರಿ ಕುಟುಂಬಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಆದೇಶದಂತೆ ಎರಡು ಲಕ್ಷ ರೂ.ಪ್ರಾಥಮಿಕ ಪರಿಹಾರ ದೊರಕಿಸಿಕೊಡುವಲ್ಲಿ ಗುಲ್ಬರ್ಗದ ಸಾಮಾಜಿಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಮುಹಮ್ಮದ್ ರಿಯಾಝುದ್ದೀನ್ ಯಶಸ್ವಿಯಾಗಿದ್ದಾರೆ.

ಜಾರ್ಖಂಡ್‌ನಲ್ಲಿ ನಡೆದ ಈ ಘಟನೆಯು ಇಡೀ ದೇಶದ ಗಮನ ಸೆಳೆದಿತ್ತು. ಕಂಬಕ್ಕೆ ಕಟ್ಟಿಹಾಕಿ ತಬ್ರೇಝ್ ಅನ್ಸಾರಿಯನ್ನು ಉದ್ರಿಕ್ತ ಗುಂಪು ಥಳಿಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ, ಈ ಘಟನೆಗೆ ಕಾರಣಕರ್ತರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಂತ್ರಸ್ತರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಲು ಕಾನೂನು ಹೋರಾಟ ನಡೆಸಿದ ಮುಹಮ್ಮದ್ ರಿಯಾಝುದ್ದೀನ್ ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

"2019ರ ಜೂನ್ 18ರಂದು ಜಾರ್ಖಂಡ್‌ನ ಸೇರಾಯ್‌ಕೇಲಾ-ಖರ್ಸಾವನ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಬಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿ, ನಾನು ಜೂ.25ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿ, ಈ ಘಟನೆಗೆ ಕಾರಣಕರ್ತರಾದ ಆರೋಪಿಗಳನ್ನು ಶೀಘ್ರವೆ ಬಂಧಿಸಬೇಕು, ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕೆಲಸದಿಂದ ವಜಾಗೊಳಿಸಬೇಕು ಎಂದು ಮನವಿ ಸಲ್ಲಿಸಿದೆ ಎಂದರು. ಅಲ್ಲದೆ, ಗುಂಪು ಹಲ್ಲೆಗಳು ನಡೆದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುಪ್ರೀಂಕೋರ್ಟ್ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಬೇಕು, ಸಂತ್ರಸ್ತರ ಕುಟುಂಬದವರಿಗೆ 1 ಕೋಟಿ ರೂ.ಪರಿಹಾರ ನೀಡಬೇಕು ಎಂದು ನನ್ನ ದೂರಿನಲ್ಲಿ ಬೇಡಿಕೆ ಸಲ್ಲಿಸಿದೆ" ಎಂದು ಅವರು ಹೇಳಿದರು.

"ಇದೀಗ ಜಾರ್ಖಂಡ್ ಸರಕಾರದಿಂದ ಎರಡು ಲಕ್ಷ ರೂ.ಗಳನ್ನು ತಬ್ರೇಝ್ ಅನ್ಸಾರಿ ಕುಟುಂಬಕ್ಕೆ ಪ್ರಾಥಮಿಕ ಪರಿಹಾರ ನೀಡಲಾಗಿದೆ. ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಗಮನಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿದ ಸೂಚನೆ ಅನ್ವಯ 13 ಜನರ ವಿರುದ್ಧ ಆರೋಪಟ್ಟಿ ದಾಖಲು ಮಾಡಲಾಗಿದೆ. ನಿರ್ಲಕ್ಷ್ಯ ತೋರಿದಂತಹ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾವಾರು ತನಿಖೆ ನಡೆಸಿ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಜಮ್ಶೇಡ್‌ಪುರದ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ" ಎಂದು ರಿಯಾಝುದ್ದೀನ್ ತಿಳಿಸಿದರು.

ತಬ್ರೇಝ್ ಅನ್ಸಾರಿ ಮೇಲೆ 18 ಗಂಟೆಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಲಾಗಿತ್ತು. ಅಲ್ಲದೆ, ‘ಜೈ ಶ್ರೀರಾಮ್’ ಹಾಗೂ ‘ಜೈ ಹನುಮಾನ್’ ಎಂದು ಘೋಷಣೆ ಕೂಗುವಂತೆ ಬಲವಂತ ಪಡಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಪೊಲೀಸರು ಸೂಕ್ತ ಚಿಕಿತ್ಸೆಯನ್ನು ಕೊಡಿಸಲಿಲ್ಲ, ಅವರ ಕುಟುಂಬದವರಿಗೂ ಗಾಯಾಳುವಾಗಿದ್ದ ತಬ್ರೇಝ್ ಅನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿರಲಿಲ್ಲ. ಈ ಘಟನೆಯಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸರು ಅಷ್ಟೇ ಜವಾಬ್ದಾರರಾಗಿದ್ದಾರೆ ಎಂದು ಅವರು ಹೇಳಿದರು.

ಜು.18ರಂದು ತಬ್ರೇಝ್ ಅನ್ಸಾರಿ ಮೇಲೆ ಆತನ ಮನೆಯಿಂದ 5 ಕಿ.ಮೀ.ದೂರದಲ್ಲಿರುವ ಪ್ರದೇಶದಲ್ಲಿ ಗುಂಪು ಹಲ್ಲೆ ನಡೆದಿತ್ತು. ತಬ್ರೇಝ್ ಅನ್ಸಾರಿ ಅನಾಥನಾಗಿದ್ದು, ಘಟನೆ ನಡೆದ ಕೆಲವು ತಿಂಗಳ ಹಿಂದಷ್ಟೆ ಶಾಹಿಸ್ತಾ ಪರ್ವೀನ್ ಎಂಬವರನ್ನು ವಿವಾಹವಾಗಿದ್ದರು.

ದಲಿತ ಮಕ್ಕಳಿಗೂ ನ್ಯಾಯ ದೊರಕಿಸಿದ ರಿಯಾಝುದ್ದೀನ್

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭಾವಖೇಡಿ ಗ್ರಾಮದಲ್ಲಿ 2019ರ ಸೆಪ್ಟಂಬರ್ 25ರಂದು ರೋಷ್ನಿ (12) ಹಾಗೂ ಅವಿನಾಶ್(10) ಎಂಬ ಇಬ್ಬರು ದಲಿತ ಮಕ್ಕಳನ್ನು ಹಾಕೀಮ್ ಮತ್ತು ರಾಮೇಶ್ವರ್ ಎಂಬ ಮೇಲ್ವರ್ಗದ ಯುವಕರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಈ ಬಗ್ಗೆಯೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ರಿಯಾಝುದ್ದೀನ್ ದೂರು ಸಲ್ಲಿಸಿದ್ದರು.

ಈ ಘಟನೆ ಕುರಿತು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಸರಕಾರ ಸಂತ್ರಸ್ತರ ಕುಟುಂಬಗಳಿಗೆ ತಲಾ 4,12,500 ರೂ.ಪರಿಹಾರವನ್ನು ನೀಡಿದ್ದಾರೆ.

Writer - -ಅಮ್ಜದ್‌ ಖಾನ್ ಎಂ.

contributor

Editor - -ಅಮ್ಜದ್‌ ಖಾನ್ ಎಂ.

contributor

Similar News