ರಾಜ್ಯ ಸರಕಾರದ ವಿರುದ್ಧ ಆಶಾ ಕಾರ್ಯಕರ್ತೆಯರ ಆಕ್ರೋಶ: ಬೀದಿಗಿಳಿಯುವ ಎಚ್ಚರಿಕೆ

Update: 2020-07-20 15:14 GMT

ಬೆಂಗಳೂರು, ಜು. 20: ಸರಕಾರ ನೀಡಿದ ಭರವಸೆಯಂತೆ ಗೌರವಧನ ಹಾಗೂ ಕೇಂದ್ರದ ಪ್ರೋತ್ಸಾಹ ಧನ ಒಟ್ಟುಗೂಡಿಸಿ ಮಾಸಿಕ 12 ಸಾವಿರ ರೂ.ಗಳಿಗೆ ನಿಗದಿಪಡಿಸಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಕೈಗೊಂಡಿರುವ ಮುಷ್ಕರ 11ನೆ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆ ಈಡೇರಿಕೆಗಾಗಿ ಜನರೊಂದಿಗೆ ಬೀದಿಗಿಳಿಯಲಿದ್ದೇವೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹಾಗೂ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಭಯ ಮುಖಂಡರುಗಳು, ಕೊರೋನ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ನಾವು ಜನರ ಸೇವೆ ಮಾಡಬೇಕು. ಆದರೆ, ನಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಮಧ್ಯಪ್ರವೇಶಿಸಿ ಆಶಾ ಕಾರ್ಯಕರ್ತೆಯರ ಕೂಗಿಗೆ ಸ್ಪಂದಿಸಬೇಕು. ಗೌರವಧನ 12 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರಿಗೆ ಜನವರಿಯಲ್ಲಿ ಭರವಸೆ ನೀಡಿರುವಂತೆ ರಾಜ್ಯ ಸರಕಾರದ ಗೌರವಧನ ಮತ್ತು ಕೇಂದ್ರದ ಪ್ರೋತ್ಸಾಹಧನ ಎರಡನ್ನೂ ಒಂದುಗೂಡಿಸಿ ಮಾಸಿಕ 12ಸಾವಿರ ರೂ. ಗೌರವಧನ ನಿಗದಿ ಮಾಡಬೇಕು ಮತ್ತು ಕೊರೋನ ಸೋಂಕಿನಿಂದ ರಕ್ಷಣೆಗೆ ಎಲ್ಲ ಸುರಕ್ಷಣಾ ಪರಿಕರಗಳನ್ನು ನೀಡಬೇಕೆಂದು ಒತ್ತಾಯಿಸಿ, ಜೂನ್ 30 ರಿಂದ ವಿವಿಧ ಹಂತದ ಹೋರಾಟಗಳನ್ನು ನಡೆಸಲಾಗುತ್ತಿದೆ. ಆದರೂ, ಸರಕಾರ ಸ್ಪಂದಿಸದೆ ಇರುವುದರಿಂದ, ಜು.10 ರಿಂದ ಸಂಪೂರ್ಣ ಕೆಲಸ ಸ್ಥಗಿತಗೊಳಿಸಿ ವಿವಿಧ ಮಾದರಿಯ ಹೋರಾಟಗಳ ಮೂಲಕ ಸರಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ನಾಗಲಕ್ಷ್ಮಿ ತಿಳಿಸಿದರು.

ಕೆಲಸ ಸ್ಥಗಿತಗೊಳಿಸಿ 10 ದಿನಗಳು ಕಳೆದರೂ ಸಮಸ್ಯೆ ಬಗೆಹರಿಸುವ ದಿಶೆಯಲ್ಲಿ ಮಾತುಕತೆಗೆ ಮುಂದಾಗದಿರುವ ರಾಜ್ಯ ಸರಕಾರದ ಜನ ವಿರೋಧಿ ಧೋರಣೆ ಸರಿಯಲ್ಲ. ಸರಕಾರ ಕೂಡಲೇ ಮಾತುಕತೆ ಮೂಲಕ ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸಬೇಕು ಎಂದ ಅವರು, ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಗೌರವಧನ ಹೆಚ್ಚಿಸುವ ಭರವಸೆ ನೀಡಿ ಇದೀಗ ಮಾತು ತಪ್ಪಿದ್ದಾರೆ ಎಂದು ದೂರಿದರು.

ಕಾರ್ಯಕರ್ತೆಯರ ಚಟುವಟಿಕೆಗಳನ್ನು ಆನ್‍ಲೈನ್ ಪೋರ್ಟಲ್‍ನಲ್ಲಿ ದಾಖಲಿಸಲು ಇರುವ ಲೋಪಗಳನ್ನು ಸರಿಪಡಿಸುವ ಹೆಸರಿನಲ್ಲಿ ವಿಳಂಬ ನೀತಿಯಿಂದಾಗಿ 2018 ಮತ್ತು 2019ರ ನಡುವೆ 15 ತಿಂಗಳುಗಳಲ್ಲಿ ಪ್ರತಿ ಕಾರ್ಯಕರ್ತೆಗೆ ಬರಬೇಕಾಗಿದ್ದ 15-25 ಸಾವಿರ ರೂ.ನಷ್ಟು ಹಣ ಬರದೇ ನಷ್ಟವಾಯಿತು. ಈಗಲೂ ಕೆಲಸಕ್ಕೆ ತಕ್ಕಷ್ಟು ಹಣ ಅವರಿಗೆ ಸಿಗುತ್ತಿಲ್ಲ. ಆದರೆ ದಿನೇ ದಿನೇ ದುಡಿಮೆ ಹೆಚ್ಚಿತೇ ಹೊರತು, ದುಡಿಮೆಗೆ ತಕ್ಕಷ್ಟು ಹಣ ಮಾತ್ರ ಕೈಗೆ ಸಿಗುತ್ತಿಲ್ಲ. ಈ ಅನ್ಯಾಯದಿಂದ ಕಾರ್ಯಕರ್ತೆಯರ ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಮಾತನಾಡಿ, ರಾಜ್ಯದಲ್ಲಿನ ಬಹುತೇಕ ಎಲ್ಲ ಆಶಾ ಕಾರ್ಯಕರ್ತೆಯರು ಬಡ ಕುಟುಂಬದ ಹಿನ್ನೆಲೆಯಿಂದ ಬರುವವರು. ಇತ್ತೀಚೆಗಷ್ಟೆ ನಡೆದ ಅವರ ಮನೆಯವರ ಜೊತೆಗಿನ ಆನ್‍ಲೈನ್ ಚಳುವಳಿಯಲ್ಲಿ ಅವರು ವಾಸಿಸುವ ಮನೆಯ ದೃಶ್ಯಗಳನ್ನು ನೋಡಿದಾಗ ಮನ ಕಲುಕುತ್ತದೆ. ಹಲವು ಆಶಾ ಕಾರ್ಯಕರ್ತೆಯರು ವಾಸಕ್ಕೂ ಯೋಗ್ಯವಲ್ಲದ ಮನೆಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಇನ್ನು ಮುಖ್ಯವಾಗಿ ಎಷ್ಟೋ ಆಶಾಗಳು ವಿಧವೆಯರಿದ್ದಾರೆ, ಒಂಟಿ ಮಹಿಳೆಯರಿದ್ದಾರೆ, ಅಂಗವಿಕಲರಿದ್ದಾರೆ. ಈ ಸರಕಾರ ಆಶಾಗಳನ್ನು ನಿರ್ಲಕ್ಷಿಸುತ್ತಿರುವುದು ಖಂಡನೀಯ ಎಂದರು.

ರಾಜ್ಯದಲ್ಲಿ ಮಾರಕ ಸೋಂಕು ಹಬ್ಬುತ್ತಿರುವ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು 10 ದಿನಗಳಿಂದ ತೀವ್ರ ಮುಷ್ಕರ ನಡೆಸುತ್ತಿರುವಾಗ ರಾಜ್ಯ ಸರಕಾರದ ನಿರ್ಲಕ್ಷ್ಯ ಸಹಿಸುವುದಿಲ್ಲ. ಇದು ಒಂದು ಜವಾಬ್ದಾರಿಯುತ ಸರಕಾರ ನಡೆದುಕೊಳ್ಳುವ ರೀತಿಯೇ ಎಂದು ಪ್ರಶ್ನಿಸಿದ ಅವರು, ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಈಗಾಗಲೇ 10ಸಾವಿರ ರೂ.ಗಳಿಗೂ ಹೆಚ್ಚು ಗೌರವಧನ ನಿಗದಿ ಪಡಿಸಲಾಗಿದೆ.

ಆಶಾಗಳ ಈ ಹೋರಾಟದ ನ್ಯಾಯ ಪರತೆಯನ್ನು ಎತ್ತಿ ಹಿಡಿದು, ಗ್ರಾಮ ಮತ್ತು ನಗರಗಳ ಬಡಜನರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ಕೆಲಸ ಮಾಡುತ್ತಿರುವವರು ಮತ್ತು ಕೊರೋನ ಸೋಂಕು ತಡೆಯಲು ನಿಜವಾದ ಯೋಧರಂತೆ ಹೋರಾಡುವ ಸಂದರ್ಭದಲ್ಲಿ ಹಲವು ಅಡಚಣೆಗಳನ್ನು ಮತ್ತು ದೈಹಿಕ ಹಲ್ಲೆಗಳನ್ನು ಸಮರ್ಥವಾಗಿ ಎದುರಿಸಿ ನಿಂತು ಕೆಲಸ ಮಾಡಿ ದೇಶದ ಮತ್ತು ರಾಜ್ಯದ ಜನಮನ ಗೆದ್ದಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News