ಮೈಸೂರು: ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಮೈಸೂರು,ಜು.20: ಕಳೆದ ಮೂರು ದಿನಗಳ ಹಿಂದೆ 100 ಅಡಿ ಆಳವಿರುವ ಬಾವಿಯೊಳಗೆ ಬಿದ್ದು ತೊಂದರೆಗೆ ಸಿಲುಕಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಪತ್ತೆ ಹಚ್ಚಿ ರಕ್ಷಿಸಿದ ಘಟನೆ ಕಾರಾಪುರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಾರಾಪುರ ಗ್ರಾಮದ ನೂರು ಅಡಿ ಅಳವಿರುವ ಬಾವಿಗೆ ಶನಿವಾರ ಚಿರತೆಯೊಂದು ಬಿದ್ದಿದೆ. ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಜಾಗೃತರಾದ ಅಧಿಕಾರಿಗಳು ಚಿರತೆ ಪತ್ತೆಗೆ ಮುಂದಾದರು. ಆದರೆ ಬಾವಿಯೊಳಗೆ ಚಿರತೆ ಕಾಣಿಸಲಿಲ್ಲ. ಇದರಿಂದ ಆತಂಕಕ್ಕೊಳಗಾದ ಅರಣ್ಯ ಇಲಾಖೆ ಅಧಿಕಾರ ಸಿದ್ದರಾಜು ತಾವೆ ಬೋನಿನಲ್ಲಿ ಕುಳಿತುಕೊಂಡು ಬಾವಿಯೊಳಗೆ ಇಳಿದು ಶೋಧಿಸಿದರು. ಆದರೂ ಪತ್ತೆಯಾಗಲಲ್ಲಿ. ನಂತರ ಗ್ರಾಮಸ್ಥರು ಸುಳ್ಳು ಹೇಳಿದ್ದಾರೆ ಎಂದು ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡರು.
ಚಿರತೆ ಬಿದ್ದಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಅದು ಹಳೆಯ ಬಾವಿ ಗುಹೆಗಳು ಇದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ನಂತರ ವಿಡಿಯೋ ಕ್ಯಾಮೆರ ಬಿಟ್ಟು ಪರಿಶೀಲಿಸಿದಾಗ ಗುಹೆಯೊಳಗೆ ಚಿರತೆ ಕುಳಿತಿರುವುದು ಖಚಿತಗೊಂಡಿದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕೆ ನೀಡಿ ಬಲೆ ಹಾಕಿ ಚಿರತೆಯನ್ನು ಸೆರೆ ಹಿಡಿದು ಬಾವಿಯಿಂದ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಚಿರತೆಯನ್ನು ಬೋನಿನೊಳಗೆ ಹಾಕಿಕೊಂಡು ಲಾರಿಯಲ್ಲಿ ಕಾಡಿಗೆ ಕೊಂಡೊಯ್ಯಲಾಯಿತು. ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.