ಲಾಕ್‍ಡೌನ್ ವಿಸ್ತರಣೆ ಮಾಡದಿರಲು ರಾಜ್ಯ ಸರಕಾರದ ತೀರ್ಮಾನ

Update: 2020-07-20 17:15 GMT

ಬೆಂಗಳೂರು, ಜು. 20: ರಾಜ್ಯದಲ್ಲಿ ಮಾರಕ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಬೆಂಗಳೂರು ಸೇರಿದಂತೆ ಆರೇಳು ಜಿಲ್ಲೆಗಳಲ್ಲಿ ಹೇರಿರುವ ಒಂದು ವಾರದ ಅವಧಿಯ ಲಾಕ್‍ಡೌನ್ ಅವಧಿಯೂ ನಾಳೆ(ಜು.21)ರ ರಾತ್ರಿಗೆ ಮುಕ್ತಾಯಗೊಳ್ಳಲಿದೆ. ಆದರೆ, ಮತ್ತೊಂದು ವಾರದ ಅವಧಿಗೆ ಲಾಕ್‍ಡೌನ್ ವಿಸ್ತರಣೆಯ ಬಗ್ಗೆ ಟಾಸ್ಕ್‍ಫೋರ್ಸ್ ಸಮಿತಿ ಸಭೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಜು.22ರ ಬೆಳಗ್ಗೆ 5ಗಂಟೆಗೆ ಲಾಕ್‍ಡೌನ್ ಅವಧಿ ಪೂರ್ಣಗೊಳ್ಳಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಲಾಕ್‍ಡೌನ್ ಸಡಿಸುವ ಸಾಧ್ಯತೆಗಳಿದ್ದು, ವ್ಯಾಪಾರ ವಹಿವಾಟು ಆರಂಭಿಸುವ ನಿರೀಕ್ಷೆಗಳಿವೆ. ರಾತ್ರಿ 8ರಿಂದ ಕರ್ಫ್ಯೂ ಇರಲಿದ್ದು, ರವಿವಾರದ ಸಂಪೂರ್ಣ ಲಾಕ್‍ಡೌನ್ ಇರಲಿದ್ದು, ಈ ಸಂಬಂಧ ನಾಳೆ(ಜು.21) ಅಧಿಕೃತ ಆದೇಶ ಹೊರಬೀಳಲಿದೆ ಎಂದು ಗೊತ್ತಾಗಿದೆ.

ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ವಿಧಾನಸೌಧ ಮತ್ತು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಅರ್ಧಕ್ಕೆ ಮೊಟಕುಗೊಂಡಿದೆ. ನಾಳೆ(ಜು.21) ಸಭೆ ನಡೆಸಿ ಲಾಕ್ ಡೌನ್ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಭೆಯ ಬಳಿಕ ಸ್ಪಷ್ಟನೆ ನೀಡಿದ್ದಾರೆ.

ಸರಕಾರದಿಂದಲೇ ವೇತನ: `ರಾಷ್ಟ್ರೀಯ ಆರೋಗ್ಯ ಯೋಜನೆ'ಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ 45 ರಿಂದ 48 ಸಾವಿರ ರೂ.ವರೆಗೆ ಮಾಸಿಕ ವೇತನವನ್ನು ರಾಜ್ಯ ಸರಕಾರವೇ ಭರಿಸಲಿದೆ. ಮುಂದಿನ 6 ತಿಂಗಳವರೆಗೆ ಇದು ಅನುಷ್ಠಾನದಲ್ಲಿರಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸೋಂಕು ಸಮುದಾಯಕ್ಕೆ ತಲುಪಿಲ್ಲ: ದೇಶದಲ್ಲಿ ಕೊರೋನ ಸೋಂಕು ಇನ್ನೂ ಸಮುದಾಯ ಹಂತಕ್ಕೆ ತಲುಪಿಲ್ಲ. 15 ದಿನಗಳಿಂದ ಮಾತ್ರವೇ ರಾಜ್ಯದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಿದೆ. ಇತರೆ ರಾಜ್ಯಗಳಲ್ಲಿ 2 ತಿಂಗಳು ಮುಂಚಿತವಾಗಿಯೇ ಈ ಮಟ್ಟದಲ್ಲಿ ಹರಡಿತ್ತು ಎಂದು ಸುಧಾಕರ್ ಇಂದಿಲ್ಲಿ ಸಮರ್ಥಿಸಿದರು.

ಬೆಂಗಳೂರಿನ ವಲಯವಾರು ಕೋವಿಡ್ ಉಸ್ತುವಾರಿ ಸಚಿವರುಗಳ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಹತ್ವದ ಸಭೆ ನಡೆಸಿದ್ದು, ಬೂತ್ ಮಟ್ಟದ ಕಾರ್ಯಪಡೆಗಳು ಸೋಂಕಿತರ, ಸಂಪರ್ಕಿತರ ಮತ್ತು ಐಎಲ್‍ಸಿ ಮತ್ತು ಎಸ್‍ಎಆರ್‍ಐ ಲಕ್ಷಣವುಳ್ಳ ವ್ಯಕ್ತಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ಪರೀಕ್ಷೆ ಮಾಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಡ್ಯಾಶ್ ಬೋರ್ಡ್‍ನಲ್ಲಿ ಈಗ ಲಭ್ಯ. ರಿಯಲ್ ಟೈಮ್ ಮಾಹಿತಿಯಿಂದ ಹಾಸಿಗೆ ಲಭ್ಯತೆ ಕಂಡುಹಿಡಿಯುವುದು ಈಗ ಸರಳ. ರಾಜ್ಯದಲ್ಲಿ ಇದುವರೆಗೆ 10,57,303 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಮರಣ ಪ್ರಮಾಣ ಶೇ.2.08ರಷ್ಟಿದೆ. ವಿಕ್ಟೋರಿಯ ಆಸ್ಪತ್ರೆಯಲ್ಲಿ ಮೇ ಯಿಂದ ಇದುವರೆಗೆ 118 ಕೋವಿಡ್ ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡಲಾಗಿದ್ದು ಎಲ್ಲ ತಾಯಂದಿರು ಹಾಗೂ ನವಜಾತ ಶಿಶುಗಳು ಆರೋಗ್ಯದಿಂದಿದ್ದಾರೆ. ಯಾವ ಮಗುವಿಗೂ ಸೋಂಕು ತಗಲಿಲ್ಲ. ಖಾಸಗಿ ಆಸ್ಪತ್ರೆಯ ವೈದ್ಯರೂ ಧೃತಿಗೆಡದೆ ಕೋವಿಡ್ ಸೋಂಕಿತರ ಹೆರಿಗೆಗೆ ಮುಂದಾಗಬೇಕು. ಗರ್ಭಿಣಿಯರಿಗೆ ಈ ಸಂದರ್ಭದಲ್ಲಿ ನೆರವಾಗಬೇಕು ಎಂದು ಡಾ.ಸುಧಾಕರ್ ಸಲಹೆ ಮಾಡಿದರು.

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿರುವ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಕುರಿತಂತೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ'

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News