​ಕೊರೋನ ಪಾದಬುಡದಲ್ಲಿ ಮೃತ ಮನುಷ್ಯನ ಘನತೆ

Update: 2020-07-21 05:26 GMT

ಬದುಕಿದ್ದಾಗ ಮಾತ್ರವಲ್ಲ, ಮೃತನಾದ ಬಳಿಕವೂ ಮನುಷ್ಯನಿಗೂ ಒಂದು ಘನತೆಯಿದೆ. ಆತ ಉಸಿರಾಡುತ್ತಿಲ್ಲ ಎನ್ನುವ ಕಾರಣಕ್ಕಾಗಿ ಆತನ ಘನತೆಯ ಜೊತೆಗೆ ಚೆಲ್ಲಾಟವಾಡುವ ಅಧಿಕಾರ ನಮಗೆ ಯಾರಿಗೂ ಇಲ್ಲ. ಪತ್ರಿಕೆಗಳು ಮೃತದೇಹದ ಭಾವಚಿತ್ರಗಳನ್ನು ಪ್ರಕಟಿಸುವ ಸಂದರ್ಭದಲ್ಲೂ ಕೆಲವು ನೀತಿ ಸಂಹಿತೆಗಳನ್ನು ಅನುಸರಿಸಬೇಕಾಗುತ್ತದೆ. ಯಾವುದೇ ಧರ್ಮವಿರಲಿ, ಮೃತಪಟ್ಟ ವ್ಯಕ್ತಿಯನ್ನು ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರವನ್ನು ನಡೆಸಲು ಆದೇಶಿಸುತ್ತದೆ. ಬಹುತೇಕ ಧರ್ಮಗಳು, ಸಾಯುವುದರೊಂದಿಗೆ ಒಬ್ಬ ವ್ಯಕ್ತಿಯ ಬದುಕು ಮುಗಿಯುವುದಿಲ್ಲ ಎಂದು ನಂಬುತ್ತವೆ. ಸಾವು ಬದುಕಿನ ಆರಂಭ ಎಂದು ಅವುಗಳು ಹೇಳುತ್ತವೆ. ನಮ್ಮ ನಡುವೆ ತಂದೆಯಾಗಿ, ತಾಯಿಯಾಗಿ, ಬಂಧುವಾಗಿ, ಗೆಳೆಯನಾಗಿ ಬದುಕಿದ ವ್ಯಕ್ತಿ ಉಸಿರಾಟ ನಿಲ್ಲಿಸಿದಾಕ್ಷಣ ಆ ಸಂಬಂಧ ಮುಗಿಯುವುದಿಲ್ಲ. ಆ ದೇಹಕ್ಕೆ ಗೌರವಯುತ ವಿದಾಯ ಹೇಳುವುದರೊಂದಿಗೆ ಆ ಸಂಬಂಧದ ನಿರ್ವಹಣೆ ಪರಿಪೂರ್ಣವಾಗುತ್ತದೆ.

ಸಾಧಾರಣವಾಗಿ, ಒಬ್ಬ ವ್ಯಕ್ತಿ ಮೃತಪಟ್ಟರೆ ಆತನ ಅಂಗಾಂಗಗಳನ್ನು ದಾನ ಮಾಡಬೇಕಾದರೆ ಬದುಕಿರುವಾಗ ಆತ ಅದನ್ನು ಅಧಿಕೃತವಾಗಿ ದಾನ ಮಾಡಿರಬೇಕಾಗುತ್ತದೆ. ಕೆಲವೊಮ್ಮೆ ಕುಟುಂಬದ ಅನುಮತಿಯನ್ನು ಪಡೆದು ಆಸ್ಪತ್ರೆಗಳು ಅವುಗಳನ್ನು ದಾನವಾಗಿ ಸ್ವೀಕರಿಸುತ್ತವೆ. ಆದರೆ, ವ್ಯಕ್ತಿ ಮೃತನಾಗಿರುವುದರಿಂದ ಆತನಿಗೆ ಅವುಗಳ ಅವಶ್ಯವಿಲ್ಲ ಎಂದು ಬಲವಂತವಾಗಿ ಅಂಗಾಂಗಗಳನ್ನು ಕಿತ್ತುಕೊಳ್ಳುವಂತಿಲ್ಲ. ಮೃತದೇಹ ಯಾವುದೋ ಕಾರಣಕ್ಕಾಗಿ ವಿಕಾರವಾಗಿದ್ದರೆ ಅಥವಾ ರೂಪ ಕೆಟ್ಟಿದ್ದರೆ ಅವುಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡುವ ಅಧಿಕಾರವೂ ಇಲ್ಲ. ಆದರೆ ಇತ್ತೀಚೆಗೆ ಕೊರೋನ ಹೆಸರಿನಲ್ಲಿ ಮೃತದೇಹಕ್ಕೆ ಎಸಗುತ್ತಿರುವ ಅವಮಾನ, ಅಪಚಾರಗಳು ಸ್ವತಃ ಮನುಷ್ಯ ತನಗೆ ತಾನೇ ಎಸಗುವ ಅಪಚಾರ ಎನ್ನುವುದನ್ನು ಅರಿಯುವ ವಿವೇಕ, ವಿದ್ಯಾವಂತರೆನಿಸಿಕೊಂಡ ಯಾರಲ್ಲೂ ಕಂಡು ಬರುತ್ತಿಲ್ಲ. ಕೊರೋನ ಸೋಂಕಿನ ಕುರಿತಂತೆ ಹೊರ ಬೀಳುತ್ತಿರುವ ಅತಿ ರಂಜಿತ ವರದಿಗಳು, ವದಂತಿಗಳು ಮೃತದೇಹಗಳನ್ನು ಸಮಾಜವೂ ಅಸ್ಪಶ್ಯವಾಗಿ ಕಾಣುವ ಸ್ಥಿತಿಗೆ ತಂದಿಟ್ಟಿವೆ. ಇದೇ ಸಂದರ್ಭದಲ್ಲಿ ಮೃತದೇಹವನ್ನು ಯಾವುದೋ ‘ಸ್ಫೋಟಕ’ವೆಂಬ ರೀತಿಯಲ್ಲಿ ಆಸ್ಪತ್ರೆಗಳು ಬಿಂಬಿಸುತ್ತಿರುವುದು, ಮೃತಕುಟುಂಬಕ್ಕೆ ಅದನ್ನು ಒಪ್ಪಿಸಲು ಸಾವಿರ ನೆಪಗಳನ್ನು ಹೇಳುತ್ತಿರುವುದು ಮೃತದೇಹದ ಕುರಿತಂತೆ ಇನ್ನಷ್ಟು ತಪ್ಪು ಕಲ್ಪನೆಗಳು ಬೆಳೆಯುವುದಕ್ಕೆ ಕಾರಣವಾಗಿದೆ. ಪರಿಣಾಮವಾಗಿ, ಯಾರಾದರೂ ಸತ್ತರೆ ಹೆಣ ಎತ್ತುವುದಕ್ಕೂ ಜನರು ಸಿಗದೇ ಇರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಮೃತ ವ್ಯಕ್ತಿ ಕೊರೋನ ಸೋಂಕಿತನಲ್ಲದೇ ಇದ್ದರೂ, ಶಂಕೆ, ಅನುಮಾನ, ವದಂತಿಗಳ ಹಿನ್ನೆಲೆಯಲ್ಲಿ ಮೃತದೇಹದ ಬಳಿ ಸುಳಿಯುವುದಕ್ಕೆ ಕುಟುಂಬಸ್ಥರೇ ಹಿಂಜರಿಯುವಂತಹ ಸನ್ನಿವೇಶ ನಿರ್ಮಾಣವಾಗಿದೆ.

 ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳನ್ನು ಅಂತ್ಯ ಸಂಸ್ಕಾರ ನಡೆಸಲು ವೈದ್ಯರ ಮಾರ್ಗದರ್ಶನದಲ್ಲಿ ಸರಕಾರವೇ ನೀತಿ ಸಂಹಿತೆಯನ್ನು ರೂಪಿಸಿದೆೆ. ಆ ಪ್ರಕಾರ ಆಸ್ಪತ್ರೆಗಳು ಮೃತದೇಹದಿಂದ ಯಾವುದೇ ರೀತಿಯಲ್ಲಿ ಸೋಂಕು ಹರಡದಂತೆ ವ್ಯವಸ್ಥೆ ಮಾಡಬೇಕಾಗುತ್ತದೆ. ಆಸ್ಪತ್ರೆಯ ಮುಂಜಾಗೃತೆಯೇ ಎಷ್ಟು ಅತಿರೇಕದಿಂದ ಕೂಡಿದೆಯೆಂದರೆ, ವೈದ್ಯರು ಹೇಳಿದ್ದಾರೆ ಎನ್ನುವ ಕಾರಣಕ್ಕಷ್ಟೇ ಅದನ್ನು ತಮ್ಮ ಕುಟುಂಬಕ್ಕೆ ಸಂಬಂಧಿಸಿದ ದೇಹ ಎನ್ನುವುದನ್ನು ಕುಟುಂಬ ಸದಸ್ಯರು ನಂಬ ಬೇಕಾಗುತ್ತದೆ. ಆ ಕುರಿತಂತೆ ಅನುಮಾನಿಸುವ, ಪ್ರಶ್ನಿಸುವ ಅಧಿಕಾರವೂ ಅವರಿಗಿಲ್ಲದಂತಾಗಿದೆ. ಅದೆಷ್ಟು ಭದ್ರವಾದ ಪ್ಯಾಕಿಂಗ್ ಇರುತ್ತದೆಯೆಂದರೆ, ಯಾರಿಗಾದರೂ ಮೃತದೇಹದ ಕುರಿತಂತೆ ಸಂಶಯ ಬಂದರೆ ಅದನ್ನು ಬಿಚ್ಚಿ ನೋಡುವಂತೆಯೂ ಇಲ್ಲ. ಆಸ್ಪತ್ರೆಗಳೆಲ್ಲವೂ ಸಾಚಾ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆಸ್ಪತ್ರೆಗಳೇ ಹೇಗೆ ಕಿಡ್ನಿಯಂತಹ ಅಕ್ರಮ ಅಂಗಾಂಗ ಕಳವಿನಲ್ಲಿ ಭಾಗವಹಿಸುತ್ತವೆ ಎನ್ನುವುದನ್ನು ಆಗಾಗ ಮಾಧ್ಯಮಗಳಲ್ಲಿ ಓದುತ್ತಿರುತ್ತೇವೆ. ಕೊರೋನದ ಈ ಸಂದರ್ಭದಲ್ಲಿ, ಇಂತಹ ಆಸ್ಪತ್ರೆಗಳು ಸಂದರ್ಭದ ಲಾಭ ಪಡೆಯುವುದಿಲ್ಲ ಎನ್ನುವಂತಿಲ್ಲ. ಕೊರೋನ ಪಾಸಿಟಿವ್ ಎಂದು ಘೋಷಿಸಲ್ಪಟ್ಟ ಮೃತದೇಹದ ಕುರಿತಂತೆ ವಹಿಸಲಾಗಿರುವ ಅತಿ ಜಾಗರೂಕತೆಯೂ ಸಮಾಜದಲ್ಲಿ ಅನುಮಾನಗಳನ್ನು ಹುಟ್ಟಿಸಿ ಹಾಕುತ್ತಿವೆ. ಕುಟುಂಬಸ್ಥರಿಗೆ ಮುಖದರ್ಶನಕ್ಕೂ ಅವಕಾಶ ಕೊಡದೆ ಮೃತದೇಹವನ್ನು ಆತುರಾತುರವಾಗಿ ಸಾಗಿಸುವುದು, ಪೌರ ಸಿಬ್ಬಂದಿಯ ಮೂಲಕ ಅದನ್ನು ದಫನ ಮಾಡಲು ಮುಂದಾಗುವುದು ಇತ್ಯಾದಿಗಳೆಲ್ಲ, ಕೊರೋನಾ ಸೋಂಕಿತ ಮೃತದೇಹದ ಕುರಿತಂತೆ ತಪ್ಪು ಸಂದೇಶ ನೀಡುತ್ತಿವೆ. ಪರಿಣಾಮವಾಗಿ ತಮ್ಮದೇ ಕುಟುಂಬ ಸದಸ್ಯನ ಮೃತದೇಹವನ್ನು ಸ್ವೀಕರಿಸಲು ಕುಟುಂಬಸ್ಥರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ, ಮೃತದೇಹವನ್ನು ತಮ್ಮ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸದಂತೆ ಜನರು ತಡೆದ ಘಟನೆಗಳು ವರದಿಯಾದವು. ಇದಕ್ಕೆ ಶಾಸಕರೆಂದು ಕರೆಸಿಕೊಂಡವರು ಕುಮ್ಮಕ್ಕು ನೀಡಿದ್ದು ತೀವ್ರ ಟೀಕೆಗೆ ಕಾರಣವಾಯಿತು. ಆದರೆ ಇದೀಗ ಸಮಾಜ ಒಂದಿಷ್ಟು ಜಾಗೃತವಾಗಿದೆ. ಇಂದು ಮೃತದೇಹದ ಅಂತಿಮ ಸಂಸ್ಕಾರಕ್ಕೆ ಕೆಲವು ಖಾಸಗಿ ಸಂಘಟನೆಗಳು ಮುಂದೆ ಬರುತ್ತಿವೆ. ಹಾಗೆಯೇ ರಾಜಕೀಯ ನಾಯಕರೂ ಇದರ ನೇತೃತ್ವ ವಹಿಸುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಇದು ಅಭಿನಂದನೀಯವಾಗಿದೆ. ಈ ಹಿಂದೆಲ್ಲ, ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ರಾಜಕಾರಣಿಗಳನ್ನು ವಿರೋಧಿಗಳು ಟೀಕಿಸುವ ಮನಸ್ಥಿತಿಯನ್ನು ಹೊಂದಿದ್ದರು. ಆದರೆ ಇಂದು ಅದೇ ರಾಜಕಾರಣಿಗಳು ಮೃತದೇಹದ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ನೇತೃತ್ವ ವಹಿಸಿ, ಜನರೊಳಗೆ ಆತ್ಮವಿಶ್ವಾಸವನ್ನು ತುಂಬುತ್ತಿದ್ದಾರೆ. ರವಿವಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ತಮ್ಮ ಕ್ಷೇತ್ರದ ವ್ಯಾಪ್ತಿಯ ಕನಕಪುರ ನಿವಾಸಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಹಲವು ರಾಜಕಾರಣಿಗಳು ಈ ರೀತಿ ಕೊರೋನ ಸೋಂಕಿತ ಸಾರ್ವಜನಿಕ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ಮಾದರಿಯಾಗುತ್ತಿದ್ದಾರೆ. ಆದರೆ ನಾವು ಒಂದನ್ನು ಗಮನಿಸಬೇಕಾಗಿದೆ. ಒಂದು ಮೃತದೇಹದ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅವರ ಕುಟುಂಬಸ್ಥರು ನೇರವಾಗಿ ಭಾಗಿಯಾಗದೆ, ಅವರಿಂದ ತಿರಸ್ಕರಿಸಲ್ಪಟ್ಟು ಬದಲಿಗೆ ಯಾವುದೋ ಸಂಘಟನೆಗಳು, ಅಧಿಕಾರಿಗಳು, ಪೌರ ಸಿಬ್ಬಂದಿ ಭಾಗವಹಿಸಿದರೆ ಖಂಡಿತವಾಗಿಯೂ ಮೃತದೇಹದ ಆತ್ಮಕ್ಕೆ ಶಾಂತಿ ದೊರಕದು.

ಒಂದು ಮೃತದೇಹದ ಅಂತಿಮ ವಿದಾಯದ ಸಂದರ್ಭದಲ್ಲಿ ಯಾವುದೋ ಅತ್ಯುನ್ನತ ರಾಜಕೀಯ ನಾಯಕ ಭಾಗವಹಿಸುವುದಕ್ಕಿಂತ ಆ ಮೃತದೇಹದ ಹತ್ತಿರದ ಸಂಬಂಧಿ ಭಾಗವಹಿಸುವುದು ಮುಖ್ಯವಾಗುತ್ತದೆ. ಆದುದರಿಂದ, ಅಂತ್ಯಸಂಸ್ಕಾರವನ್ನು ಮೃತರಿಗೆ ಸಂಬಂಧವೇ ಪಡದ ಯಾವುದೋ ರಾಜಕೀಯ ಸಂಘಟನೆಗಳು, ರಾಜಕೀಯ ನಾಯಕರು ನಡೆಸುವುದಕ್ಕಿಂತ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಮುಕ್ತವಾಗಿ ಭಾಗವಹಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ಮೃತದೇಹವನ್ನು ವೈದ್ಯಕೀಯ ವಿಧಿವಿಧಾನಗಳ ಮೂಲಕ ಸಂಪೂರ್ಣ ಪ್ಲಾಸ್ಟಿಕ್‌ನಿಂದ ಮುಚ್ಚಿದ ಬಳಿಕವೂ, ಅದನ್ನು ಕುಟುಂಬಸ್ಥರಿಗೆ ಒಪ್ಪಿಸಲು ಆಸ್ಪತ್ರೆಗಳು ಮತ್ತು ಜಿಲ್ಲಾಡಳಿತ ಸಾವಿರ ನಿಬಂಧನೆಗಳನ್ನು ಒಡ್ಡುವುದು ಅಲ್ಲಲ್ಲಿ ಬೆಳಕಿಗೆ ಬರುತ್ತಿವೆ. ಮೃತದೇಹವನ್ನು ಸಂಪೂರ್ಣ ಕಪ್ಪು ಪ್ಲಾಸ್ಟಿಕ್‌ನಿಂದ ಮುಚ್ಚುವ ಬದಲು ಮುಖವಾದರೂ ಕಾಣುವಂತೆ ಪಾರದರ್ಶಕವಾದ ಪ್ಲಾಸ್ಟಿಕ್‌ನ್ನು ಬಳಸಬೇಕು. ಇದೇ ಸಂದರ್ಭದಲ್ಲಿ ಕುಟುಂಬಸ್ಥರು ಅಂತ್ಯ ಸಂಸ್ಕಾರ ನಡೆಸಲು ಸಿದ್ಧರು ಎಂದಾದರೆ ಕುಟುಂಬದ ಸದಸ್ಯರನ್ನು, ಗ್ರಾಮಸ್ಥರನ್ನು ಕಾರ್ಯದಲ್ಲಿ ಸಂಪೂರ್ಣವಾಗಿ ಒಳಗೊಳ್ಳುವಂತೆ ಮಾಡಬೇಕು. ಅತಿ ಜಾಗರೂಕತೆಯ ಹೆಸರಿನಲ್ಲಿ ಮೃತದೇಹವನ್ನು ಆಸ್ಪತ್ರೆಗಳು ‘ಸ್ಫೋಟಕ’ ವಸ್ತುವಿನ ರೂಪದಲ್ಲಿ ಜನರ ಮುಂದೆ ಪ್ರದರ್ಶಿಸುವುದನ್ನು ನಿಲ್ಲಿಸಬೇಕು.

ಮೃತದೇಹದ ಕುರಿತಂತೆ ಆಸ್ಪತ್ರೆಗಳು ಗರಿಷ್ಠ ಮಟ್ಟದಲ್ಲಿ ಪಾರದರ್ಶಕ ನೀತಿಯನ್ನು ಅನುಸರಿಸಬೇಕು. ಮೃತದೇಹದ ಯಾವುದೇ ಅಂಗಾಂಗಗಳಿಗೆ ಊನವಾಗಿಲ್ಲ ಅಥವಾ ಅಂಗಾಂಗಗಳ ಅಪಹರಣವಾಗಿಲ್ಲ ಎನ್ನುವುದರಿಂದ ಹಿಡಿದು, ಇದು ನಮ್ಮದೇ ಕುಟುಂಬ ಸದಸ್ಯರ ಮೃತದೇಹ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವ ಹಕ್ಕನ್ನು ಕುಟುಂಬಸ್ಥರಿಗೆ ನೀಡಬೇಕು. ಕೊರೋನ ಸೋಂಕಿತ ಮೃತದೇಹದ ಅಂತ್ಯಸಂಸ್ಕಾರವನ್ನು ಕುಟುಂಬಸದಸ್ಯರು ಯಾವುದೇ ಅಂಜಿಕೆಯಿಲ್ಲದೆ, ಯಾರದೇ ಆಕ್ಷೇಪವಿಲ್ಲದೆ ಮುಕ್ತವಾಗಿ ನೆರವೇರಿಸುವ ವಾತಾವರಣ ನಿರ್ಮಾಣವಾಗುವುದು, ಕೊರೋನ ಸೋಂಕನ್ನು ಎದುರಿಸುವಲ್ಲಿ ನಾವಿಡುವ ಮಹತ್ವದ ಹೆಜ್ಜೆ ಎನ್ನುವುದನ್ನು ಸರಕಾರ ಮರೆಯಬಾರದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News