ಪದವಿಪೂರ್ವ ಉಪನ್ಯಾಸಕರ ನೇಮಕಕ್ಕೆ ಆಗಸ್ಟ್ 10ಕ್ಕೆ ಕೌನ್ಸೆಲಿಂಗ್: ಸಚಿವ ಸುರೇಶ್ ಕುಮಾರ್

Update: 2020-07-20 17:44 GMT

ಬೆಂಗಳೂರು, ಜು. 20: `ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ನೇಮಕಾತಿಯ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆಗಸ್ಟ್ 10ರಿಂದ ಆರಂಭಿಸಲು ನಿರ್ಧರಿಸಲಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ಈ ಸಂಬಂಧ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಪಿಯುಸಿ ಉಪನ್ಯಾಸಕರನ್ನು ಕೌನ್ಸೆಲಿಂಗ್ ದಿನಾಂಕ ನಿರ್ಧರಿಸುವ ಕುರಿತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಪದವಿ ಪೂರ್ವ ಮಂಡಳಿಯ ನಿರ್ದೇಶಕರ ಜೊತೆ ಸಭೆ ಸೇರಿ ಚರ್ಚಿಸಲಾಗಿದೆ ಎಂದು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, `ದ್ವಿತೀಯ ಪಿಯುಸಿ ಫಲಿತಾಂಶ ಕುಸಿಯಲು ಉಪನ್ಯಾಸಕರ ಕೊರತೆಯೂ ಕಾರಣ ಎನ್ನುವುದು ಸತ್ಯ. ಇದರ ಹೊಣೆಯನ್ನು ಪಿಯುಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ವಹಿಸಬೇಕಾಗುತ್ತದೆ' ಎಂದು ಟ್ವಿಟ್ಟರ್ ಮೂಲಕ ಎಚ್ಚರಿಸಿದ್ದರು. ಆ ಹಿನ್ನೆಲೆಯಲ್ಲಿ ಎಚ್ಚೆತ್ತ ಸಚಿವ ಸುರೇಶ್ ಕುಮಾರ್, ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್ ಮೂಲಕ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಇದೀಗ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್‍ಗೆ ದಿನಾಂಕ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News