ಶವಸಂಸ್ಕಾರಕ್ಕೆ ಅಡ್ಡಿ ಮಾಡದಂತೆ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮನವಿ

Update: 2020-07-20 17:46 GMT

ರಾಮನಗರ, ಜು.20: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಡ್ಡಿಮಾಡದೆ ಮಾನವೀಯತೆಯಿಂದ ಅಂತಿಮ ವಿಧಿ-ವಿಧಾನಗಳನ್ನು ನೆರೆವೇರಿಸಲು ಸಹಕರಿಸುವಂತೆ ಜಿಲ್ಲೆಯ ಜನರಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಮನವಿ ಮಾಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಯಾವುದೇ ಸಮುದಾಯದವರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು. ಅಂತಿಮ ವಿಧಿವಿಧಾನಗಳನ್ನು ಕುಟುಂಬಸ್ಥರ ಸಮ್ಮುಖದಲ್ಲೆ ಮತ್ತು ಇದಕ್ಕಾಗಿ ಜಿಲ್ಲಾಡಳಿತದ ವತಿಯಿಂದ ನೇಮಿಸಲಾಗಿರುವ ಅಧಿಕಾರಿಗಳ ಸಹಯೋಗದೊಂದಿಗೆ ನೆರವೇರಿಸಬೇಕು. ಮೃತ ವ್ಯಕ್ತಿಯ ಸಭ್ಯ ಶವ ಸಂಸ್ಕಾರಕ್ಕೆ ಜಿಲ್ಲೆಯ ಜನತೆ ನೆರವಾಗುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ನಡೆಸಲು ಸರಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ಸೋಂಕಿತ ಶವವನ್ನು ಸಂಪೂರ್ಣವಾಗಿ ಪ್ಯಾಕ್ ಮಾಡಿ ವೈರಸ್ ನಿವಾರಕ ದ್ರಾವದಲ್ಲಿ ಅದ್ದಿ ಸ್ಯಾನಿಟೈಸ್ ಮಾಡಿರುತ್ತಾರೆ. ಪ್ಯಾಕ್ ಮಾಡಿರುವ ಮೃತ ದೇಹವನ್ನು ಮತ್ತೆ ತೆರೆಯಲು ಸಾಧ್ಯವೇ ಇರುವುದಿಲ್ಲ. ಹೀಗಾಗಿ ಮೃತ ದೇಹದಿಂದ ಸೋಂಕು ಹರಡುವ ಸಾಧ್ಯತೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಆದರೂ ಮೃತ ದೇಹದ ಅಂತಿಮ ಸಂಸ್ಕಾರವನ್ನು ವೈದ್ಯಕೀಯ ಶಿಷ್ಟಾಚಾರದಂತೆ ನೆರವೇರಿಸಬೇಕಾಗಿರುತ್ತದೆ. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಕುಟುಂಬಸ್ಥರು ಶವಸಂಸ್ಕಾರದಲ್ಲಿ ಭಾಗವಹಿಸಬಹುದು. ಇದಕ್ಕಾಗಿ ಆರೋಗ್ಯ ಇಲಾಖೆ ನಿಗದಿಪಡಿಸಿರುವ ಮಾನದಂಡಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಾನವೀಯತೆ ಇರಲಿ: ನಿಮ್ಮೊಂದಿಗೆ ಇರುವ ನಿಮ್ಮ ಆಪ್ತರೇ ಇಲ್ಲವೆ ಬಂಧು-ಬಳಗದವರಾಗಲಿ ಅಥವಾ ನಿಮ್ಮ ಗ್ರಾಮದ ವ್ಯಕ್ತಿಯೊಬ್ಬರು ಸೋಂಕಿನಿಂದ ನಿಧನರಾದಲ್ಲಿ ಅವರ ಶವಸಂಸ್ಕಾರಕ್ಕೆ ಅಡ್ಡಿ ಮಾಡುವುದು ಸರಿಯಲ್ಲ. ಯಾವುದೇ ದೃಷ್ಠಿಯಿಂದಲೂ ಇದನ್ನು ಒಪ್ಪಿಕೊಳ್ಳಲಾಗದು. ಮೃತರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ನಿಮ್ಮ ನಿಮ್ಮ ಊರುಗಳಲ್ಲಿ ಅವಕಾಶ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆಯಿರಿ ಎಂದು ಜಿಲ್ಲಾಧಿಕಾರಿ ಜನರಲ್ಲಿ ಪ್ರಾರ್ಥಿಸಿದ್ದಾರೆ.

ಭಯಬೇಡ: ಸೋಂಕಿತ ಮೃತರ ಅಂತ್ಯ ಸಂಸ್ಕಾರ ನಡೆಸಿದರೆ ಇಲ್ಲವೆ ಶವವನ್ನು ಹೂಳಿದರೆ ಅದರಿಂದ ಸೋಂಕು ಹರಡುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆರೋಗ್ಯ ಇಲಾಖೆಯು ಸೋಂಕಿತ ಶವವನ್ನು ಎಲ್ಲ ರೀತಿಯಿಂದಲೂ ಸೋಂಕು ಹರಡದಂತೆ ಸಂರಕ್ಷಿಸಿರುತ್ತಾರೆ. ಹೀಗಾಗಿ ಜನರು ಭಯಪಡುವ ಅಗತ್ಯವಿಲ್ಲ ಎಂದು ಅರ್ಚನಾ ತಿಳಿಸಿದ್ದಾರೆ.

ಶವವನ್ನು ಸುಟ್ಟರೆ ಇಲ್ಲವೆ ಹೂತರೆ ಅದರಿಂದ ಸೋಂಕು ಹರಡುವುದಿಲ್ಲ. ಜನತೆಯು ಇದನ್ನು ಅರಿತುಕೊಳ್ಳಬೇಕು. ಜಿಲ್ಲೆಯ ಜನರು ಶವಸಂಸ್ಕಾರಕ್ಕೆ ಅಡ್ಡಿಪಡಿಸದೆ ಸಹಕಾರ ನೀಡುವ ಮೂಲಕ ಅವರ ನೋವಿನ ಕ್ಷಣದಲ್ಲಿ ಹೆಗಲು ನೀಡುವಂತೆ ಜನತೆಯಲ್ಲಿ ಜಿಲ್ಲಾಧಿಕಾರಿ ಕೋರಿದ್ದಾರೆ.

ಸಭ್ಯ ಶವಸಂಸ್ಕಾರಕ್ಕೆ ಅಡ್ಡಿ ಮಾಡುವ ಇಲ್ಲವೆ ಪ್ರತಿರೋಧ ತೋರುವವರ ಮೇಲೆ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳಡಿ ದಂಡನಾತ್ಮಕವಾಗಿರುತ್ತದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅರ್ಚನಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News