ಬಕ್ರೀದ್ ಆಚರಣೆಗೆ ತೊಡಕುಂಟು ಮಾಡುವ ಹುನ್ನಾರ: ಸರಕಾರದ ಕ್ರಮಕ್ಕೆ ವೆಲ್ಫೇರ್ ಪಾರ್ಟಿ ಖಂಡನೆ

Update: 2020-07-20 17:48 GMT

ಬೆಂಗಳೂರು, ಜು.20: ಬಕ್ರೀದ್ ಹಬ್ಬದ ಆಚರಣೆಗೆ ತೊಡಕುಂಟು ಮಾಡಲು ಸರಕಾರ ಹುನ್ನಾರ ನಡೆಸಿರುವುದು ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ರಾಜ್ಯದಲ್ಲಿ ಹಬ್ಬದ ದಿನಗಳನ್ನು ಒಳಗೊಂಡಂತೆ ಅನಧಿಕೃತ ಗೋವು, ಒಂಟೆಗಳ ಸಾಗಾಣಿಕೆಗಳನ್ನು ಮತ್ತು ಸಾಮೂಹಿಕ ಹತ್ಯೆಯನ್ನು ತಡೆಗಟ್ಟಲು ಸರಕಾರವು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಿದ್ದು, ಸದರಿ ಸಮಿತಿಯು ಅನಧಿಕೃತ ಪ್ರಾಣಿಹತ್ಯೆ ಸಾಗಾಣಿಕೆ ಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು ಎಂದು ನಿರ್ದೇಶಿಸಿದ್ದಾರೆ.

ಆದುದರಿಂದ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ರಾಣಿಗಳ ವಧೆಯನ್ನು ತಡೆಯುವ ನಿಟ್ಟಿನಿಂದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರ್.ಟಿ.ಓ ಇಲಾಖೆ, ಪಶುಪಾಲನಾ ಇಲಾಖೆ, ಬಿಬಿಎಂಪಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಅಲ್ಲದೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಎನ್.ಜಿ.ಓಗಳನ್ನು ಸೇರಿಸಿಕೊಳ್ಳಬೇಕು ಎಂದು ಹೇಳಿರುವುದು ಸಂಘ ಪರಿವಾರ ಪ್ರಾಯೋಜಿತ ಸ್ವಯಂ ಘೋಷಿತ ಗೋ ರಕ್ಷಕ ಸಂಘಟನೆಗಳಿಗೆ ಗೋ ರಕ್ಷಣೆಯ ಹುಸಿ ನೆಪದಲ್ಲಿ ದಾಳಿಗಳನ್ನು ನಡೆಸಲು ಮುಕ್ತ ಅವಕಾಶ ಕೊಟ್ಟಂತಾಗುತ್ತದೆ ಎಂದು ಶ್ರೀಕಾಂತ್ ಸಾಲಿಯಾನ್ ಆರೋಪಿಸಿದ್ದಾರೆ.

ಬಕ್ರೀದ್ ಹಬ್ಬದ ಆಚರಣೆಗೆ ತೊಡಕು ಉಂಟು ಮಾಡುವ ಹುನ್ನಾರ ಇದಾಗಿದ್ದು, ಕೂಡಲೇ ಸರಕಾರ ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕು. ಜಾತ್ಯತೀತ ನಾಡಿನಲ್ಲಿ ಕೋಮುವಾದಿ ತನಕ್ಕೆ ಪ್ರಚೋದನೆ ನೀಡುವ ಕೃತ್ಯಗಳು ನಿಲ್ಲಬೇಕು. ಸರಕಾರದ ಆದೇಶದಿಂದ ಒಂದು ಕೋಮಿನ ಭಾವನೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ರಾಜ್ಯ-ದೇಶ ಹಾಗೂ ಜಗತ್ತಿನಾದ್ಯಂತ ಮುಸ್ಲಿಮರು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಸರಳವಾಗಿ ಹಬ್ಬವನ್ನು ಆಚರಿಸಲು ಸರಕಾರ ಅನುಮತಿಸಬೇಕೇ ಹೊರತು, ಇಂತಹ ಗೊಂದಲದ ಆದೇಶಗಳನ್ನು ನೀಡುವ ಮೂಲಕ ಮತೀಯ ಭಾವನೆ ಕೆರಳಿಸುವುದು ಖಂಡನೀಯವಾಗಿದೆ. ರಾಜ್ಯದಲ್ಲಿ ಶಾಂತಿಯುತವಾಗಿ, ಸರಳ ರೀತಿಯಿಂದ ಸುರಕ್ಷಿತ ಅಂತರ ಕಾಯ್ದುಕೊಂಡು ಹಬ್ಬ ಆಚರಣೆ ಮಾಡಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶ್ರೀಕಾಂತ್ ಸಾಲಿಯಾನ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News