ಚಿಕ್ಕಮಗಳೂರು: ಒಂದೇ ದಿನ 43 ಮಂದಿಗೆ ಕೊರೋನ ಪಾಸಿಟಿವ್; ಓರ್ವ ಮೃತ್ಯು

Update: 2020-07-20 17:58 GMT

ಚಿಕ್ಕಮಗಳೂರು, ಜು.20: ಕಾಫಿನಾಡು ಕೊರೋನ ಹಾಟ್‍ಸ್ಪಾಟ್ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಆರಂಭದ ದಿನಗಳಿಗಿಂತ ಸದ್ಯ ಮೂರು ಪಟ್ಟು ಹೆಚ್ಚಾಗಿವೆ. ಸೋಮವಾರ ಜಿಲ್ಲೆಯಲ್ಲಿ 43 ಹೊಸ ಪಾಸಿಟಿವ್ ಪ್ರಕರಗಳು ವರದಿಯಾಗಿದ್ದು, ಸೋಂಕಿಗೆ ತುತ್ತಾಗಿದ್ದ 72 ವರ್ಷದ ಓರ್ವ ವೃದ್ಧರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೂಡಿಗೆರೆ, ಅಜ್ಜಂಪುರ ತಾಲೂಕು ಹೊರತು ಪಡಿಸಿ ಐದು ತಾಲೂಕುಗಳಲ್ಲೂ ಸೋಂಕಿತರು ಪತ್ತೆಯಾಗಿದ್ದಾರೆ.

ಸೋಮವಾರ ಜಿಲ್ಲೆಯಲ್ಲಿ ವರದಿಯಾಗಿರುವ 43 ಪ್ರಕರಣಗಳ ಪೈಕಿ ಅತೀ ಹೆಚ್ಚು ಪ್ರಕರಣಗಳು ಕೊಪ್ಪ ತಾಲೂಕಿನಲ್ಲಿ ವರದಿಯಾಗಿದ್ದು, ಈ ತಾಲೂಕಿನಲ್ಲಿ ಒಂದೇ ದಿನ 17 ಪ್ರಕರಣಗಳು ದಾಖಲಾಗಿವೆ. ಇನ್ನು ಚಿಕ್ಕಮಗಳೂರು ತಾಲೂಕಿನಲ್ಲಿ 12 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ತರೀಕೆರೆ 5, ಕಡೂರು 4, ಶೃಂಗೇರಿ 3 ಹಾಗೂ ನರಸಿಂಹರಾಜಪುರ 2 ಪ್ರಕರಣಗಳು ದಾಖಲಾಗಿವೆ. ಅಜ್ಜಂಪುರ ಹಾಗೂ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.

ಇನ್ನು ಸೋಮವಾರ ಸೋಂಕಿತ ತುತ್ತಾಗಿ ಕೋವಿಡ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು 72 ವರ್ಷ ವಯಸ್ಸಿನವರಾಗಿದ್ದು, ಚಿಕ್ಕಮಗಳೂರು ನಗರದ ಅಂಜುಮಾನ್ ಸ್ಟ್ರೀಟ್‍ನ ನಿವಾಸಿಯಾಗಿದ್ದಾರೆ. ಸೋಂಕಿಗೆ ತುತ್ತಾಗಿದ್ದ ಇವರನ್ನು ಇತ್ತೀಚೆಗೆ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ಬೆಳಗ್ಗೆ ಈ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಸೋಮವಾರ ಸೋಂಕಿನಿಂದ ಮೃತ ವೃದ್ಧನ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿಗೆ ತುತ್ತಾಗಿ ಮೃತರಾದವರ ಸಂಖ್ಯೆ 10ಕ್ಕೇರಿದೆ.

ಸೋಮವಾರ ವರದಿಯಾಗಿರುವ 43 ಸೋಂಕಿತರನ್ನು ನಗರದ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಮಾಡಲಾಗಿದ್ದು, ದ್ವಿತೀಯ ಸಂಪರ್ಕಗಳ ಪತ್ತೆಗೆ ತಂಡ ಕಾರ್ಯನಿರ್ವಹಿಸುತ್ತಿದೆ. ಸೋಂಕಿತರು ವಾಸವಿದ್ದ ಪ್ರದೇಶಗಳ ವ್ಯಾಪ್ತಿಯಲ್ಲಿ ಸೀಲ್‍ಡೌನ್, ಕಂಟೈನ್‍ಮೆಂಟ್ ಝೋನ್ ಪ್ರದೇಶಗಳನ್ನು ಗುರುತು ಮಾಡಲಾಗಿದ್ದು, ಈ ಸ್ಥಳಗಳ ವ್ಯಾಪ್ತಿಗೆ ಘಟನಾ ಕಮಾಂಡರ್ ಗಳನ್ನಾಗಿ ಆಯಾ ತಾಲೂಕು ವ್ಯಾಪ್ತಿಯ ತಹಶೀಲ್ದಾರ್ ಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸೋಮವಾರ ವರದಿಯಾಗಿರುವ 43 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 334ಕ್ಕೇರಿದೆ. ಇದೇ ವೇಳೆ ಸೋಮವಾರ ಸೋಂಕಿನಿಂದ ಗುಣಮುಖರಾದ 18 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಆಸ್ಪತ್ರೆಯಿಂದ ಇದುವರೆಗೆ ಬಿಡುಗಡೆಯಾದವರ ಸಂಖ್ಯೆ 136ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿರುವ ಸಕ್ರಿಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ 171ಕ್ಕೇರಿದೆ.

2 ಪೊಲೀಸ್ ಠಾಣೆ, ಆಹಾರ ಇಲಾಖೆ ಕಚೇರಿ ಸೀಲ್‍ಡೌನ್
ಸೋಮವಾರ ಚಿಕ್ಕಮಗಳೂರು ತಾಲೂಕಿನಲ್ಲಿ ವರದಿಯಾಗಿರುವ 12 ಪ್ರಕರಣಗಳ ಪೈಕಿ ಪೊಲೀಸ್ ಇಲಾಖೆಯ ಇಬ್ಬರು ಪೇದೆಗಳು ಹಾಗೂ ಆಹಾರ ಇಲಾಖೆ ಓರ್ವ ಹಿರಿಯ ಅಧಿಕಾರಿಯಲ್ಲಿ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆ, ಚಿಕ್ಕಮಗಳೂರು ನಗರ ಸಂಚಾರಿ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಇದೇ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಆಹಾರ ಇಲಾಖೆಯ ಕಚೇರಿಯನ್ನೂ ಸೋಮವಾರ ಸೀಲ್‍ಡೌನ್ ಮಾಡಲಾಗಿದೆ.

9 ಮಂದಿ ಎಎನ್‍ಎಫ್ ಸಿಬ್ಬಂದಿಗೆ ಸೋಂಕು
ಜಿಲ್ಲೆಯಲ್ಲಿ ರವಿವಾರ ವರದಿಯಾಗಿದ್ದ 41 ಪ್ರಕರಣಗಳ ಪೈಕಿ ಶೃಂಗೇರಿ ತಾಲೂಕೊಂದರಲ್ಲೇ 11 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ತಾಲೂಕಿನ ಕೆರೆಕಟ್ಟೆ ಗ್ರಾಮದಲ್ಲಿ 9 ಮಂದಿಗೆ ಪಾಸಿಟಿವ್ ಇರುವುದು ವರದಿಯಾಗಿತ್ತು. ಈ 9 ಪ್ರಕರಣಗಳು ಕೆರೆಕಟ್ಟೆ ಗ್ರಾಮದಲ್ಲಿರುವ ನಕ್ಸಲ್ ನಿಗ್ರಹ ಪಡೆಯ ಕ್ಯಾಂಪ್‍ನ ಸಿಬ್ಬಂದಿಯಲ್ಲಿ ಕಂಡು ಬಂದಿರುವುದು ಬೆಳಕಿಗೆ ಬಂದಿದೆ. ಕ್ಯಾಂಪ್‍ನಲ್ಲಿದ್ದ ಓರ್ವ ಎಎನ್‍ಎಫ್ ಸಿಬ್ಬಂದಿ ಬೆಂಗಳೂರಿನಗೆ ಹೋಗಿ ಹಿಂದಿರುಗಿದ್ದು, ಈ ವ್ಯಕ್ತಿ ಮೂಲಕ ಕ್ಯಾಂಪ್‍ನ 9 ಎಎನ್‍ಎಫ್ ಸಿಬ್ಬಂದಿಗೆ ಸೋಂಕು ಹರಡಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News