ಎಸ್ಸಿ ಪಟ್ಟಿಯಿಂದ ಸ್ಪೃಶ್ಯ ಜಾತಿ ಕೈಬಿಡಲು ಒತ್ತಾಯಿಸಿ ಸಚಿವ ಆನಂದ್‍ ಸಿಂಗ್ ಮನೆ ಎದುರು ಧರಣಿ

Update: 2020-07-20 18:19 GMT
ಸಚಿವ ಆನಂದ್‍ ಸಿಂಗ್

ಬಳ್ಳಾರಿ, ಜು.20: ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸ್ಪೃಶ್ಯ ಜಾತಿಗಳನ್ನು ಸೇರ್ಪಡೆ ಮಾಡಿದ್ದರಿಂದ ಅಸ್ಪೃಶ್ಯ ಜಾತಿಗಳಾದ ಹೊಲೆಯ, ಮಾದಿಗ, ಸಮಗಾರ, ಮೋಚಿ, ಡೋರ ಜಾತಿಗಳಿಗೆ ಅನ್ಯಾಯವಾಗಿದ್ದು, ಈ ಕೂಡಲೇ ಎಸ್ಸಿ ಪಟ್ಟಿಯಿಂದ ಕೈಬಿಡುವಂತೆ ಆಗ್ರಹಿಸಿ ಅಸ್ಪೃಶ್ಯ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಹೊಸಪೇಟೆ ನಗರದ ರಾಣಿಪೇಟೆಯಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‍ ಸಿಂಗ್ ಮನೆ ಎದುರು ಪ್ರತಿಭಟನೆ ನಡೆಸಿದರು.

ಮೀಸಲಾತಿ ಪ್ರಯೋಜನಗಳು ಅಸ್ಪೃಶ್ಯ ಜಾತಿಗಳಿಗೆ ಸಿಗುವ ಬದಲು ಸ್ಪೃಶ್ಯ ಜಾತಿಗಳಿಗೆ ಸಿಗುತ್ತಿವೆ ಎಂದು ನ್ಯಾಯಾಲಯಗಳೂ ಹೇಳಿವೆ. ಆದರೂ ರಾಜ್ಯ ಸರಕಾರ ಎಸ್ಸಿ ಪಟ್ಟಿಯಲ್ಲಿ ಸ್ಪೃಶ್ಯ ಜಾತಿಗಳನ್ನು ಸೇರಿಸುವ ಮೂಲಕ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುತ್ತಿವೆ. ಈ ಕೂಡಲೇ ಸ್ಪೃಶ್ಯ ಜಾತಿಗಳನ್ನು ಕೈಬಿಡಬೇಕೆಂದು ಒಕ್ಕೂಟದ ಕಾರ್ಯಕರ್ತರು ಸಿಎಂ ಬಿಎಸ್‍ವೈ ಹೆಸರಿಗೆ ಬರೆದ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು.

ಒಕ್ಕೂಟದ ಮುಖಂಡ ಸೋಮಶೇಖರ್ ಬಣ್ಣದಮನೆ ಮಾತನಾಡಿ, ನಾವು ಯಾವುದೇ ಜಾತಿಯ ವಿರುದ್ಧ ಹೋರಾಟ ಮಾಡುತ್ತಿಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಇಂದಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ನಮಗೆ ನ್ಯಾಯ ಒದಗಿಸಬೇಕು. ಮೀಸಲಾತಿ ಎಂಬುದು ನಮ್ಮ ಪಾಲಿಗೆ ಗಗನ ಕುಸುಮವಾಗಿದೆ. ಬಸವಣ್ಣ, ಅಂಬೇಡ್ಕರ್ ನಮ್ಮ ಪಾಲಿಗೆ ದೇವು ಎಂದು ತಿಳಿಸಿದರು. ಅಲ್ಲದೆ, ಮೂಲ ಅಸ್ಪಶ್ಯ ಜಾತಿಗಳ ಮೀಸಲು ಪ್ರಮಾಣವನ್ನು ಶೇ.15ರಿಂದ 20ಕ್ಕೆ ಹೆಚ್ಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News