ನಾಗರಪಂಚಮಿ ದಿನ ಹುತ್ತಕ್ಕೆ ಹಾಲು ಎರೆಯುವ ಬದಲು ಬಡವರಿಗೆ ನೀಡಿ: ಸತೀಶ್ ಜಾರಕಿಹೊಳಿ

Update: 2020-07-21 12:29 GMT

ಬೆಂಗಳೂರು, ಜು.21: ರಾಜ್ಯಾದ್ಯಂತ ಜು.25ರಂದು ಆಚರಿಸಲ್ಪಡುವ ನಾಗರಪಂಚಮಿ ಹಬ್ಬದಂದು ನಾಗರ ಹುತ್ತಕ್ಕೆ ಹಾಗೂ ನಾಗ ಪ್ರತಿಮೆಗಳಿಗೆ ಹಾಲು ಎರೆಯುವ ಬದಲು, ಅದೇ ಹಾಲನ್ನು ಬಡ ಮಕ್ಕಳಿಗೆ ಮತ್ತು ರೋಗಿಗಳಿಗೆ ನೀಡಬೇಕೆಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.

ಹಬ್ಬದ ನೆಪದಲ್ಲಿ ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವಿಗೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ರೀತಿ ಅವೈಜ್ಞಾನಿಕವಾಗಿ ಆಚರಿಸ್ಪಡುವ ಹಬ್ಬದ ಕಾರಣದಿಂದಾಗಿ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ. ಇದೇ ಹೊತ್ತಿನಲ್ಲಿ ರಾಜ್ಯದಲ್ಲಿ ಪ್ರತಿವರ್ಷ 40 ಸಾವಿರಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಮರಣ ಹೊಂದುತ್ತಿದ್ದಾರೆಂದು ನಾವು ಗಮನಿಸಬೇಕು. ಹುತ್ತಗಳಿಗೆ ಹಾಲನ್ನು ಸುರಿಯುವ ಮೂಲಕ ಹಾವುಗಳ ಪ್ರಾಣಕ್ಕೆ ಅಪಾಯ ತರುವ ಬದಲು ಅದೇ ಹಾಲನ್ನು ಬಡವರಿಗೆ, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಂಚುವ ಮೂಲಕ ಪೌಷ್ಟಿಕ ಆಹಾರ ಪೋಲಾಗುವುದನ್ನು ತಪ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಮಾನವ ಬಂಧತ್ವ ವೇದಿಕೆಯ ಕಾರ್ಯಕರ್ತರು ಜು.25ರಂದು ಹುತ್ತಕ್ಕೆ ಹಾಲು ಎರೆಯುವ ಬದಲಾಗಿ ತಮ್ಮ ಮನೆಗಳಲ್ಲಿ, ಸುತ್ತಲಿನ ಬಡ ಮಕ್ಕಳಿಗೆ ಮತ್ತು ರೋಗಿಗಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಿದ್ದಾರೆ. ಆ ಮೂಲಕ ಜನತೆಗೆ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಗರಪಂಚಮಿಯ ದಿನ ಹುತ್ತಕ್ಕೆ ಹಾಲು ಎರೆಯುವ ಮೌಢ್ಯಾಚರಣೆಯನ್ನು ವಿರೋಧಿಸಿ ಬಡ ಮಕ್ಕಳಿಗೆ, ರೋಗಿಗಳಿಗೆ ಹಾಲನ್ನು ವಿತರಿಸುವ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆಯಿಂದ ಪ್ರತಿವರ್ಷ ದೊಡ್ಡಮಟ್ಟದ ಕಾರ್ಯಕ್ರಮವಾಗಿ ಆಯೋಜಿಸುತ್ತಿದ್ದೆವು. ಆದರೆ, ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ನಾಡಿನ ಪ್ರಗತಿಪರ ಸ್ವಾಮೀಜಿಗಳು, ವಿವಿಧ ಸಂಘಟನೆಗಳು, ಪ್ರಜ್ಞಾವಂತ ಜನರು ತಾವಿರುವ ಸ್ಥಳದಲ್ಲೇ ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.
-ಸತೀಶ್ ಜಾರಕಿಹೊಳಿ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News