ಕಲಬುರಗಿ: ವೆಂಟಿಲೇಟರ್ ಸಿಗದೆ ಅಂಗನವಾಡಿ ಕಾರ್ಯಕರ್ತೆ ಸಾವು; ಆರೋಪ
ಕಲಬುರಗಿ, ಜು.21: ಲೋ ಬಿಪಿ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಸರಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೊರತೆಯಿಂದಾಗಿ ಮೃತಪಟ್ಟಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ ಎನ್ನಲಾಗಿದೆ.
ಮೃತರನ್ನು ಅಕ್ಕನಾಗಮ್ಮ(50) ಎಂದು ಗುರುತಿಸಲಾಗಿದೆ. ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ನಿವಾಸಿ ಅಕ್ಕನಾಗಮ್ಮ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ, ಸೋಮವಾರ ರಾತ್ರಿ ಎರಡು ಗಂಟೆಯಿಂದ ವೆಂಟಿಲೇಟರ್ ಗಾಗಿ ಕುಟುಂಬಸ್ಥರು ಪರದಾಡಿದ್ದಾರೆ ಎನ್ನಲಾಗಿದ್ದು, ರಾತ್ರಿ ಪೂರ್ತಿ ಅಕ್ಕನಾಗಮ್ಮಳನ್ನು ಆ್ಯಂಬುಲೆನ್ಸ್ ನಲ್ಲಿ ಇಟ್ಟು ಸುತ್ತಾಡಿದ್ದಾರೆ ಎಂದು ತಿಳಿದುಬಂದಿದೆ.
ಕುಟುಂಬಸ್ಥರು ಮಹಿಳೆಯನ್ನು ಜಿಮ್ಸ್, ಇಎಸ್‌ಐ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಕೊನೆಗೆ ಇಂದು ಹೈದರಾಬಾದ್ ಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ. ವೆಂಟಿಲೇಟರ್ ಸಿಗದೆ ಮಹಿಳೆ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.