ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಾಟ್ಸ್‌ಆ್ಯಪ್ ನಿಂದ ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಸಂದೇಶ

Update: 2020-07-21 13:50 GMT

ಬೆಂಗಳೂರು, ಜು. 21: ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಸಂಬಂಧ ವಿಧಾನಮಂಡಲ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ `ಪೆನ್‍ಡ್ರೈವ್ ಸಾಕ್ಷ್ಯ'ದ ಮೂಲಕ ಸುದ್ದಿಯಾಗಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುರುಗೇಶ್ ಆರ್.ನಿರಾಣಿ, ಇದೀಗ ಹಿಂದೂ ದೇವರುಗಳ ಕುರಿತ ಅವಹೇಳನಕಾರಿ ಸಂದೇಶವೊಂದನ್ನು ವಾಟ್ಸ್‌ಆ್ಯಪ್ ಗುಂಪಿಗೆ ರವಾನಿಸಿದ್ದಾರೆ ಎನ್ನಲಾಗಿದ್ದು, ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿಗೆ ತೀವ್ರ ಮುಜುಗರ ಸೃಷ್ಟಿಸಿದ್ದಾರೆ.

'ಮುರುಗೇಶ್ ನಿರಾಣಿ ಮೀಡಿಯಾ ಗ್ರೂಪ್' ಎಂಬ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಮಾಜಿ ಸಚಿವ ಹಾಗೂ ಶಾಸಕ ಮುರುಗೇಶ್ ನಿರಾಣಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಸೇರಿದಂತೆ ಮಾಧ್ಯಮಗಳ ಪ್ರತಿನಿಧಿಗಳಿದ್ದಾರೆ. ಆ ಗುಂಪಿಗೆ `ಮಗಳನ್ನ ಮದುವೆಯಾದ ಬ್ರಹ್ಮ, 16 ಸಾವಿರ ಹೆಂಡಿರನ್ನ ಹೊಂದಿದ್ದ ಕೃಷ್ಣ, ತಲೆ ಮೇಲೆ ಒಬ್ಬಳು-ತೊಡೆ ಮೇಲೆ ಒಬ್ಬಳನ್ನ ಇಟ್ಟುಕೊಂಡಾತ, ಗರ್ಭಿಣಿ ಪತ್ನಿಯನ್ನ ಕಾಡಿಗಟ್ಟಿದ ರಾಮ ನಮಗೆ ದೇವರು.. ಹಾವು, ಹಂದಿ, ಕುದುರೆ, ಕತ್ತೆ, ನಾಯಿ, ಆಕಳು ಸೇರಿ ಹಲವು ಪ್ರಾಣಿಗಳು ದೇವರಾದರೆ.. ಕಾಗೆ, ಗೂಬೆ, ಬೆಕ್ಕು ಇವು ಅಪಶಕುನ..' `ವಿಶ್ವಗುರು ಅಪ್ಪ ಬಸವಣ್ಣ ಪತಿವ್ರತೆಯರನ್ನು(ಸೂಳೆ) ತಾಯಿಯಾಗಿ ಕಂಡ ಜಗತ್ತಿನ ಏಕೈಕ ದಾರ್ಶನಿಕರು..’ ಹೀಗೆ ಶ್ರೀರಾಮ, ಕೃಷ್ಣ, ಬ್ರಹ್ಮ, ಶಿವ ಸೇರಿದಂತೆ ಹಿಂದೂ ದೇವರು-ದೇವತೆಗಳನ್ನು, ಮಹಿಳೆಯರನ್ನು ಅವಹೇಳನ ಮಾಡಿದ ಸಂದೇಶವನ್ನು ಖುದ್ದು ನಿರಾಣಿ ಅವರ ಮೊಬೈಲ್ ಸಂಖ್ಯೆಯಿಂದಲೇ ರವಾನಿಸಲಾಗಿದೆ. ಈ ಸಂದೇಶ ನಿನ್ನೆ ರಾತ್ರಿ ರವಾನೆಯಾಗಿದ್ದು, ಕೂಡಲೇ ಸಚಿವ ಸುರೇಶ್ ಕುಮಾರ್ ಅವರು ಗುಂಪಿನಿಂದ ಹೊರ ಹೋಗಿದ್ದಾರೆ.

ಸಿದ್ದರಾಮಯ್ಯ ಆಕ್ರೋಶ: `ದೇವರ ಬಗ್ಗೆ ನಂಬಿಕೆ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಬಿಜೆಪಿಯವರು ಹೇಳಬೇಕು' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, `ದೇವರಿದ್ದಾನೆ, ದೇವರು ಒಬ್ಬನೇ. ದೇವರ ಬಗ್ಗೆ ನಂಬಿಕೆ ಇಟ್ಟುಕೊಂಡಿರುವವರು ಈ ರೀತಿ ಅವಹೇಳನಕಾರಿಯಾಗಿ ಸಂದೇಶಗಳನ್ನು ಹರಿಯಬಿಡುವುದಿಲ್ಲ' ಎಂದು ಟೀಕಿಸಿದ್ದಾರೆ.

`ಬಿಜೆಪಿ ಶಾಸಕ ಮುರುಗೇಶ್ ನಿರಾಣಿಯವರು ದೇವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾದ ಸಂದೇಶ ಹಾಕಿದ್ದರೆ ಅದು ಉದ್ಧಟತನ. ನಾವೂ ವೇದ, ಪುರಾಣಗಳನ್ನು ಓದಿಕೊಂಡಿದ್ದೇವೆ. ಹಣ, ಅಧಿಕಾರ ಜಾಸ್ತಿಯಾದಾಗ ದೇವರ ಬಗ್ಗೆ ಹೀಗೆ ಅವಹೇಳನಕಾರಿಯಾಗಿ ನಡೆದುಕೊಳ್ಳುತ್ತಾರೆ ಎಂದು ಸಿದ್ಧರಾಮಯ್ಯ ಇದೇ ವೇಳೆ ವಾಗ್ದಾಳಿ ನಡೆಸಿದ್ದಾರೆ.

ನಿರಾಣಿ ಸ್ಪಷ್ಟನೆ: ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ, `ತಪ್ಪಾಗಿ ಈ ಸಂದೇಶ ರವಾನೆಯಾಗಿದೆ ಎಲ್ಲರೂ ಅದನ್ನು ಅಳಿಸಿಹಾಕಿ' ಎಂದು ಕೋರಿ ತನ್ನದೆ ವಾಟ್ಸ್‌ಆ್ಯಪ್ ಗ್ರೂಪ್‍ನಿಂದ ಲೆಫ್ಟ್ ಆಗಿದ್ದಾರೆ. ಆ ಬಳಿಕ ಟ್ವಿಟ್ಟರ್ ಮೂಲಕ ವಿಡಿಯೋವೊಂದನ್ನು ಹಾಕಿರುವ ನಿರಾಣಿ ಸ್ಪಷ್ಟನೆ ನೀಡಿದ್ದು, ರಾಜ್ಯದ ಜನತೆಯ ಕ್ಷಮೆ ಕೋರಿದ್ದಾರೆ.

'ನಾನು ಯಾವುದೇ ಸಂದೇಶವನ್ನು ಮಾಧ್ಯಮ ಗುಂಪಿಗೆ ರವಾನಿಸಿಲ್ಲ. ನನ್ನ ಶುಗರ್(ಸಕ್ಕರೆ) ಕಂಪೆನಿ ಹೆಸರಿನಲ್ಲಿರೋ ಮೊಬೈಲ್ ಸಂಖ್ಯೆಯಿಂದ ನಮ್ಮ ಸಿಬ್ಬಂದಿ ಅವರಿಗೆ ಬಂದ ಸಂದೇಶವನ್ನ ಗ್ರೂಪ್‍ಗೆ ರವಾನಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಾನು ಹಿಂದು, ಇಸ್ಲಾಂ, ಕ್ರಿಶ್ಚಿಯನ್ ಧರ್ಮ ಮತ್ತು ದೇವರುಗಳ ಬಗ್ಗೆ ನನಗೆ ನಂಬಿಕೆ ಹೊಂದಿದ್ದೇನೆ'.

'ನಿನ್ನೆ ರಾತ್ರಿ ನನ್ನ ಆಪ್ತ ಸಹಾಯಕ ನನ್ನ ಮೊಬೈಲ್ ಅನ್ನು ಇಟ್ಟುಕೊಂಡಿದ್ದು, ಅವರು ಆ ಸಂದೇಶವನ್ನು ರವಾನಿಸಿದ್ದು, ನನ್ನ ಬಳಿ ಕ್ಷಮೆ ಕೋರಿದ್ದಾರೆ. ಉದ್ದೇಶಪೂರ್ವಕವಾಗಿ ಈ ಸಂದೇಶ ರವಾನಿಸಿಲ್ಲ. ಅಚಾತುರ್ಯದಿಂದ ಈ ಕಾರ್ಯ ನಡೆದಿದೆ. ನಾನು ಸರ್ವಧರ್ಮ ಸಹಿಷ್ಣು, ಎಲ್ಲ ಧರ್ಮ ಮತ್ತು ದೇವರುಗಳ ಬಗ್ಗೆ ಶ್ರದ್ಧೆಹೊಂದಿದ್ದೇನೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ ನನ್ನ ಸಿಬ್ಬಂದಿ ಪರವಾಗಿ ನಾನು ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸುತ್ತಿದ್ದೇನೆ' ಎಂದು ಸ್ಪಷ್ಟನೆ ನೀಡಿದ್ದಾರೆ.

ದೇವರು ಮತ್ತು ಧರ್ಮ ಅವರವರ ನಂಬಿಕೆ, ಅದನ್ನು ನಾವು ಗೌರವಿಸಬೇಕು. ಅವಹೇಳನ ಮಾಡಬಾರದು. ದೇವರು ಧರ್ಮದ ಹೆಸರಿನಲ್ಲಿ ಮುಗ್ದರ ಶೋಷಣೆ, ಮೂಢನಂಬಿಕೆಯ ಆಚರಣೆ ಮಾಡುವುದು ತಪ್ಪು. ರಾಜಕೀಯ ಇಲ್ಲವೇ ಇನ್ಯಾವುದೋ ಸ್ವಾರ್ಥಸಾಧನೆಗಾಗಿ ದೇವರು-ಧರ್ಮವನ್ನು ದುರ್ಬಳಕೆ ಮಾಡುವುದು ತಪ್ಪು. ಆದರೆ, ದೇವರನ್ನು ಗೇಲಿ-ಅವಹೇಳನ ಮಾಡುವುದು ವಿಕೃತಿ. ಇದನ್ನು ಯಾರೂ ಮಾಡಿದರೂ ಖಂಡನೀಯ'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News