ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಆಗಸ್ಟ್ 1ರಂದು ಈದುಲ್ ಅಝ್ ಹಾ
ಬೆಂಗಳೂರು, ಜು.21: ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಈದುಲ್ ಅಝ್ ಹಾ(ಬಕ್ರೀದ್)ವನ್ನು ಆಗಸ್ಟ್ 1ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿಟಿ ಮಾರುಕಟ್ಟೆ ಜಾಮೀಯಾ ಮಸೀದಿಯ ಖತೀಬ್- ಓ-ಇಮಾಮ್ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ ತಿಳಿಸಿದ್ದಾರೆ.
ಮಂಗಳವಾರ ಸಂಜೆ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಮರ್ಕಝಿ ರುಯ್ಯತ್-ಎ-ಹಿಲಾಲ್ ಕಮಿಟಿ(ರಾಜ್ಯ ಚಂದ್ರ ದರ್ಶನ ಸಮಿತಿ)ಯ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ಬೀದರ್, ಹರಿಹರ, ಚಿಕ್ಕಮಗಳೂರು, ಕೋಲಾರ ಹಾಗೂ ಹುಬ್ಬಳ್ಳಿ ಸೇರಿದಂತೆ ಎಲ್ಲಿಯೂ ದುಲ್ಹಜ್ ಮಾಸದ ಚಂದ್ರದರ್ಶನವಾದ ಮಾಹಿತಿ ಲಭ್ಯವಾಗಿಲ್ಲ. ಅದೇ ರೀತಿ, ಹೊರ ರಾಜ್ಯಗಳ ಪ್ರಮುಖ ನಗರಗಳಾದ ದಿಲ್ಲಿ, ಮೇವಾತ್, ಗುಜರಾತ್, ಮುಂಬೈ, ಅಲಹಾಬಾದ್, ಚೆನ್ನೈ ಹಾಗೂ ಇತರ ಸ್ಥಳಗಳಲ್ಲಿಯೂ ಚಂದ್ರದರ್ಶನವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಹೇಳಿದರು.
ಆದುದರಿಂದ, ಎಲ್ಲ ಉಲಮಾಗಳು ಸರ್ವಾನುಮತದಿಂದ ಆಗಸ್ಟ್ 1ರಂದು ಈದುಲ್ ಅಝ್ ಹಾ ಆಚರಿಸಲು ನಿರ್ಧರಿಸಿದ್ದಾರೆ ಎಂದು ಮಕ್ಸೂದ್ ಇಮ್ರಾನ್ ರಶಾದಿ ಹೇಳಿದರು.
ಸಭೆಯಲ್ಲಿ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನ ಅಬ್ದುಲ್ ಖದೀರ್ ಶಾ ವಾಜೀದ್, ಹಝ್ರತ್ ಖಾರಿ ಮುಹಮ್ಮದ್ ಝುಲ್ಫಿಖಾರ್ ರಝಾ ನೂರಿ, ಮೌಲಾನ ಏಜಾಝ್ ಅಹ್ಮದ್ ನದ್ವಿ ಪಾಲ್ಗೊಂಡಿದ್ದರು.