ದೇಶದಲ್ಲಿ ಅಕ್ಟೋಬರ್, ನವೆಂಬರ್ ನಲ್ಲಿ ಕೊರೋನ ಸೋಂಕು ಇಳಿಕೆಯಾಗಬಹುದು: ಸಚಿವ ಶ್ರೀರಾಮುಲು

Update: 2020-07-21 15:58 GMT

ಬೆಂಗಳೂರು, ಜು. 21: `ಮಹಾಮಾರಿ ಕೊರೋನ ವೈರಸ್ ಸೋಂಕಿನ ಪ್ರಮಾಣ ವಿಶ್ವ ಸಂಸ್ಥೆ ಪ್ರಕಾರ ಭಾರತದಲ್ಲಿ ಅಕ್ಟೋಬರ್, ನವೆಂಬರ್ ನಲ್ಲಿ ಇಳಿಕೆಯಾಗಬಹುದು. ಹೀಗಾಗಿ ಈ ಬಗ್ಗೆ ಆಶಾವಾದಿಗಳಾಗಿರೋಣ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, `ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ನಾವೆಲ್ಲ ಒಂದು ತಂಡವಾಗಿ ಕೊರೋನ ಸೋಂಕಿನ ವಿರುದ್ಧ ಹಗಲಿರುಳೂ ಕೆಲಸ ಮಾಡುತ್ತಿದ್ದೇವೆ. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸರಕಾರ ಕಾಲಕಾಲಕ್ಕೆ ತ್ವರಿತವಾಗಿ ಅನೇಕ ಉಪಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದೆ. ಲಾಕ್‍ಡೌನ್ ತೆರವು ಮಾಡಿದ ನಂತರ ಹೊರ ರಾಜ್ಯಗಳಿಂದ ಹೆಚ್ಚು ಜನ ಬಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕು ಹೆಚ್ಚಿತು' ಎಂದು ಸ್ಪಷ್ಟನೆ ನೀಡಿದ್ದಾರೆ.

`ಕಲವು ಕಡೆಗಳಲ್ಲಿ ಲ್ಯಾಬ್ ಟೆಕ್ನೀಷಿಯನ್‍ಗಳು ಸೋಂಕಿಗೆ ತುತ್ತಾಗಿದ್ದರಿಂದ ಲ್ಯಾಬ್‍ಗಳನ್ನು ಸೀಲ್ ಮಾಡಲಾಯಿತು. ಇದರಿಂದ ಪರೀಕ್ಷೆ ಮಾಡಲು ತೊಂದರೆಯಾಯಿತು. ಈ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಜಿಲ್ಲಾ ಮಟ್ಟದಲ್ಲಿ ಲ್ಯಾಬ್‍ಗಳ ಸಂಖ್ಯೆಯನ್ನು ಜಾಸ್ತಿ ಮಾಡುತ್ತಿದ್ದೇವೆ' ಎಂದು ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News