ಚಿಕ್ಕಮಗಳೂರಿನಲ್ಲಿ 68 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 402ಕ್ಕೇರಿಕೆ
ಚಿಕ್ಕಮಗಳೂರು, ಜು.21: ಕಾಫಿನಾಡಿನಲ್ಲಿ ಕೊರೋನ ನಾಗಾಲೋಟ ಮುಂದುವರಿದಿದೆ. ಜಿಲ್ಲೆಯಲ್ಲಿ ಮಂಗಳವಾರ 68 ಮಂದಿಯಲ್ಲಿ ಸೋಂಕು ಇರುವುದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದ್ದು, ಜಿಲ್ಲೆಯ 8 ತಾಲೂಕುಗಳಲ್ಲೂ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಜಿಲ್ಲೆಯ ಪೊಲೀಸ್ ಠಾಣೆಯೊಂದರ ನಾಲ್ವರು ಸಿಬ್ಬಂದಿಗೆ ಪಾಸಿಟಿವ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.
ಮಂಗಳವಾರ ಜಿಲ್ಲೆಯಲ್ಲಿ ವರದಿಯಾಗಿರುವ 68 ಪ್ರಕರಣಗಳ ಪೈಕಿ ಕಡೂರು ತಾಲೂಕಿನಲ್ಲಿ 18 ಪ್ರಕರಣಗಳು ವರದಿಯಾಗಿದ್ದರೆ, ಚಿಕ್ಕಮಗಳೂರು ತಾಲೂಕಿನಲ್ಲಿ 17 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ 8, ಕೊಪ್ಪ 7, ನರಸಿಂಹರಾಜಪುರ 7, ಮೂಡಿಗೆರೆ 6, ಅಜ್ಜಂಪುರ 3, ತರೀಕೆರೆಯಲ್ಲಿ 2 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಮಂಗಳವಾರ ಜಿಲ್ಲೆಯ ಎಲ್ಲ ತಾಲೂಕು ವ್ಯಾಪ್ತಿಯಲ್ಲೂ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದು ವಿಶೇಷವಾಗಿದೆ.
ಜಿಲ್ಲೆಯಲ್ಲಿ ದಾಖಲಾಗಿರುವ 68 ಸೋಂಕಿತರನ್ನು ನಗರದ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಮಾಡಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ದ್ವಿತೀಯ ಸಂಪರ್ಕಗಳ ಪತ್ತೆಗೆ ತಂಡ ಕಾರ್ಯನಿರ್ವಹಿಸುತ್ತಿದೆ. ಸೋಂಕಿತರು ವಾಸವಿದ್ದ ಪ್ರದೇಶಗಳ ವ್ಯಾಪ್ತಿಯಲ್ಲಿ ಸೀಲ್‍ಡೌನ್, ಕಂಟೈನ್‍ಮೆಂಟ್ ಜೋನ್ ಪ್ರದೇಶಗಳನ್ನು ಗುರುತು ಮಾಡಲಾಗಿದ್ದು, ಈ ಸ್ಥಳಗಳ ವ್ಯಾಪ್ತಿಗೆ ಘಟನಾ ಕಮಾಂಡರ್ ಗಳನ್ನಾಗಿ ಆಯಾ ತಾಲೂಕು ವ್ಯಾಪ್ತಿಯ ತಹಶೀಲ್ದಾರ್ ಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕಾಫಿನಾಡಿನಲ್ಲಿ ಮಂಗಳವಾರ ವರದಿಯಾಗಿರುವ 68 ಪ್ರಕರಣಗಳು ಸೇರಿ ಒಟ್ಟು ಸೋಂಕಿತರ ಸಂಖ್ಯೆ 402ಕ್ಕೇರಿದೆ. ಸೋಂಕಿನಿಂದ ಗುಣಮುಖರಾದ 11 ಮಂದಿಯನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ಬಿಡುಗಡೆಗೊಂಡವರ ಸಂಖ್ಯೆ 154ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿರುವ ಸಕ್ರೀಯ ಪ್ರಕರಣಗಳ ಸಂಖ್ಯೆ 227ಕ್ಕೇರಿದ್ದು, ಜು.20ರವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ 10 ಮಂದಿ ಮೃತಪಟ್ಟಿದ್ದಾರೆ.
ನಾಲ್ವರು ಪೊಲೀಸರಿಗೆ ಸೋಂಕು; ಠಾಣೆ ಸೀಲ್‍ಡೌನ್
ಕಳಸ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಕೊರೋನ ಪಾಸಿಟಿವ್ ಇರುವುದು ಮಂಗಳವಾರ ದೃಢಪಟ್ಟಿದ್ದು, ಪಟ್ಟಣದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.
ಠಾಣೆಯ ಪೊಲೀಸರಿಗೆ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬರುತ್ತಿದ್ದಂತೆ ಠಾಣಾ ಆವರಣಕ್ಕೆ ಆಗಮಿಸಿದ ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರೇಮ್ ಕುಮಾರ್, ಕಂದಾಯ ನಿರೀಕ್ಷಕ ಅಜ್ಜೇಗೌಡ, ಪಿಡಿಒ ಕವೀಶ್, ಲೆಕ್ಕ ಪರಿಶೋದಕ ಸಂತೋಷ್, ವಿಎ ಪ್ರಸನ್ನ ಮತ್ತಿತರ ಅಧಿಕಾರಿಗಳ ತಂಡ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿದರು. ಪೊಲೀಸ್ ಠಾಣೆಯಿಂದ ನೂರು ಮೀ. ದೂರದಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶ ನೀಡಿದರು.
ಇದೇ ವೇಳೆ ಪೊಲೀಸ್ ಠಾಣೆ ಹಾಗೂ ಕೆ.ಎಂ.ರಸ್ತೆ, ಮುಖ್ಯ ರಸ್ತೆಯಲ್ಲಿ ಸ್ಯಾನಿಟೈಸ್ ಮಾಡಲಾಯಿತು. ಸೋಂಕಿತ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಚಿಕ್ಕಮಗಳೂರು ನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ತೆಗೆದು ತಪಾಸಣೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಪಟ್ಟಣದಲ್ಲಿ ಹೆಚ್ಚಿದ ಆತಂಕ
ಕಳಸ ಮುಖ್ಯ ರಸ್ತೆಯಲ್ಲಿರುವ ಪೊಲೀಸ್ ನಾಲ್ವರು ಠಾಣಾ ಸಿಬ್ಬಂದಿಗೆ ಕೊರೋನ ಪಾಸಿಟೀವ್ ದೃಡವಾಗುತ್ತಿದ್ದಂತೆ ಪಟ್ಟಣದ ಜನತೆ ಆತಂಕಕ್ಕೀಡಾಗಿದ್ದಾರೆ. ಈ ಹಿಂದೆ ಪಟ್ಟಣದ ನಾಲ್ವರಿಗೆ ಸೋಂಕು ತಗುಲಿದ್ದು, ಇತ್ತೀಚೆಗೆ ಅವರು ಗುಣಮುಖರಾಗಿ ಹಿಂದಿರುಗುತ್ತಿದ್ದಂತೆ ಮತ್ತೆ ನಾಲ್ವರಿಗೆ ಸೋಂಕು ತಗುಲಿರುವುದು ಸಾರ್ವಜನಿಕಲ್ಲಿ ಮತ್ತಷ್ಟು ಭಯ ಆವರಿಸಲು ಕಾರಣವಾಗಿದೆ. ಕಳಸಕ್ಕೆ ಇತ್ತೀಚೆಗೆ ಪ್ರವಾಸಿಗರು ಬಂದಾಗ ಅವರನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಪೊಲೀಸರಿಗೆ ಕೊರೋನ ಅಂಟಿಕೊಂಡಿರಬಹುದು ಅಥವಾ ಹೊರ ಜಿಲ್ಲೆಗಳಲ್ಲಿ ಕರ್ತವ್ಯಕ್ಕೆ ಹೋಗಿದ್ದಾಗ ಸೋಂಕು ಹರಡಿರಬಹುದೆಂದು ಆರೋಗ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.