ಅಸ್ತಿತ್ವಕ್ಕಾಗಿ ರಾಜ್ಯ ಸರಕಾರದ ವಿರುದ್ಧ ಆರೋಪ: ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಸಚಿವ ಸೋಮಶೇಖರ್ ಕಿಡಿ
ಬೆಂಗಳೂರು, ಜು. 21: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಹೊಂದಾಣಿಕೆ ಇಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟಕ್ಕಾಗಿ ಇಬ್ಬರು ನಾಯಕರು ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಸೂಚನೆ ಹಿನ್ನೆಲೆಯಲ್ಲಿ ನಿನ್ನೆ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಡಿಸಿಎಂ ಡಾ.ಅಶ್ವತ್ಥ ನಾರಾಯಣ ವೈದ್ಯಕೀಯ ಉಪಕರಣಗಳ ಖರೀದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರಕಾರ ಯಾವುದೇ ಅವ್ಯವಹಾರವನ್ನು ನಡೆಸಿಲ್ಲ. ಎಲ್ಲವೂ ಪಾರದರ್ಶಕವಾಗಿಯೇ ನಡೆಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಂಪುಟದ ಎಲ್ಲ ಸಹೋದ್ಯೋಗಿಗಳು ಎಡಬಿದಡೆ ಕೊರೋನ ಸೋಂಕಿನ ನಿಯಂತ್ರಣಕ್ಕಾಗಿ ಹೋರಾಟದಲ್ಲಿ ತೊಡಗಿದ್ದೇವೆ. ಇಂತಹ ಸಂದರ್ಭದಲ್ಲಿ ವಿಪಕ್ಷಗಳ ಆರೋಪ ಸರಿಯಲ್ಲ ಎಂದು ಆಕ್ಷೇಪಿಸಿದರು.
ಲಾಕ್‍ಡೌನ್ ಪರಿಹಾರವಲ್ಲ: ಕೊರೋನ ಸೋಂಕು ನಿಯಂತ್ರಣಕ್ಕೆ ವೈಯುಕ್ತಿಕವಾಗಿ ನಾನು ಲಾಕ್‍ಡೌನ್ ವಿರೋಧಿ. ಕೆಲವು ತಾಂತ್ರಿಕ ಕಾರಣದಿಂದ ಈ ಬಾರಿ ಒಂದು ವಾರ ಲಾಕ್‍ಡೌನ್ ಮಾಡುವ ತೀರ್ಮಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ರಮ ಕೈಗೊಂಡಿದ್ದರು. ಲಾಕ್‍ಡೌನ್ ಮಾಡುವುದರಿಂದ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂಬುದು ಸುಳ್ಳು. ಇದರಲ್ಲಿ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕು ಎಂದು ಸೋಮಶೇಖರ್ ತಿಳಿಸಿದರು.
ಸಮಿತಿ ರಚನೆ: ಕೊರೋನ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹೆಚ್ಚಿದೆ. ರೋಗ ಲಕ್ಷಣಗಳು ಕಂಡುಬಂದರೆ ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ. ಇನ್ನು ಕೆಲವರು ಆರೋಗ್ಯವಾಗಿದ್ದರೂ ಪರೀಕ್ಷೆ ಮಾಡಿ ಎಂಬ ದೂರುಗಳು ಕೇಳಿಬಂದಿವೆ. ಅದಕ್ಕೆ ಅರಿವು ಮೂಡಿಸಲಾಗುತ್ತದೆ. ಒಂದು ವಲಯದಲ್ಲಿ ಐದಾರು ಮಂದಿಯಂತೆ ಸಮಿತಿ ರಚಿಸಿ ಆಶಾ ಕಾರ್ಯಕರ್ತೆಯರನ್ನೂ ಅದಕ್ಕೆ ನಿಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಿಪಿ ಪರೀಕ್ಷೆ: ಹೇರೋಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವತಃ ಸಚಿವ ಸೋಮಶೇಖರ್ ಅವರು ರಕ್ತದೊತ್ತಡ(ಬಿಪಿ) ಪರೀಕ್ಷೆ ಮಾಡಿಸಿಕೊಂಡರು. ಬಳಿಕ ಮಾತ್ರೆ, ಔಷಧಗಳ ದಾಸ್ತಾನುಗಳ ಬಗ್ಗೆ ಪರಿಶೀಲನೆ ನಡೆಸಿದರು. ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದಾಗಲೂ ಕೈಯಲ್ಲಿ ಪೆನ್ನು ಹಾಗೂ ಪೇಪರ್ ಅನ್ನು ಹಿಡಿದುಕೊಂಡು, ಆಯಾ ವ್ಯಾಪ್ತಿಯಲ್ಲಿರುವ ಪಾಸಿಟಿವ್ ಸೋಂಕಿತರ ಸಂಖ್ಯೆ ಎಷ್ಟು? ಎಷ್ಟು ಮಂದಿ ಮೃತಪಟ್ಟಿದ್ದಾರೆ? ಎಂಬಿತ್ಯಾದಿ ಮಾಹಿತಿಗಳನ್ನು ವೈದ್ಯಾಧಿಕಾರಿಗಳ ಬಳಿ ಕೇಳಿ ಲೆಕ್ಕ ಪಟ್ಟಿ ಮಾಡಿಕೊಂಡರು.
ವೈದ್ಯರು ಧೈರ್ಯ ಹೇಳಬೇಕು: ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರು ಎಡಬಿಡದೆ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಪಾಸಿಟಿವ್ ಪತ್ತೆಯಾದ ಬಳಿಕ ಅವರಿಗೆ ಧೈರ್ಯ ಹೇಳುವ ಕೆಲಸ ಆಗಬೇಕು. ವೈದ್ಯರು ನೀಡುವ ಧೈರ್ಯವೇ ಸೋಂಕಿತರನ್ನು ಶೇ.50ರಷ್ಟು ಗುಣಮುಖರನ್ನಾಗಿ ಮಾಡುತ್ತದೆ. ಆ ಕೆಲಸ ಪ್ರತಿಯೊಬ್ಬ ವೈದ್ಯಕೀಯ ಸಿಬ್ಬಂದಿಯಿಂದ ಆಗಬೇಕು ಎಂದರು.