ನಂ.1 ಆಲ್‌ರೌಂಡರ್ ಸ್ಥಾನಕ್ಕೇರಿದ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್

Update: 2020-07-22 04:49 GMT

ದುಬೈ, ಜು.22: ಇಂಗ್ಲೆಂಡ್‌ನ ಆಟಗಾರ ಬೆನ್ ಸ್ಟೋಕ್ಸ್ ಅವರು ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಅವರನ್ನು ಹಿಂದಿಕ್ಕಿ ವಿಶ್ವದ ಅಗ್ರ ಶ್ರೇಯಾಂಕಿತ ಟೆಸ್ಟ್ ಆಲ್‌ರೌಂಡರ್ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ ಮತ್ತು ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ ಮೂರನೇ ಸ್ಥಾನವನ್ನು ಗಳಿಸಿದ್ದಾರೆ. ಓಲ್ಡ್ ಟ್ರಾಫರ್ಡ್‌ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ನೆರವಿನಲ್ಲಿ ಬೆನ್‌ಸ್ಟೋಕ್ಸ್ ಈ ಸಾಧನೆ ಮಾಡಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 176, 78 ರನ್ ಗಳಿಸಿ 54 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಹೋಲ್ಡರ್‌ನ್ನು ಹಿಮ್ಮೆಟ್ಟಿಸಿದ ಸ್ಟೋಕ್ಸ್ ಅವರು 38 ಪಾಯಿಂಟ್ಸ್ ಗಳ ಮುನ್ನಡೆ ಸಾಧಿಸಿದ್ದಾರೆ. ಮೂರು ವಿಕೆಟ್‌ಗಳನ್ನು ಉಡಾಯಿಸಿದ ಸ್ಟೋಕ್ಸ್ ಇಂಗ್ಲೆಂಡ್‌ಗೆ 113 ರನ್‌ಗಳ ಜಯ ಗಳಿಸಲುನೆರವಾದರು. ಇದರೊಂದಿಗೆ ಇಂಗ್ಲೆಂಡ್-ವಿಂಡೀಸ್ ಸರಣಿ 1-1 ಸಮಬಲಗೊಂಡಿದೆ.

ಹೋಲ್ಡರ್ 18 ತಿಂಗಳಿನಿಂದ ನಂ. 1 ಸ್ಥಾನದಲ್ಲಿದ್ದರು. ಅವರನ್ನು ಸ್ಟೋಕ್ಸ್ ಹಿಂದಿಕ್ಕಿದ್ದಾರೆ. ಮೇ 2006ರಲ್ಲಿ ಆಂಡ್ರೊ ಫ್ಲಿಂಟಾಫ್ ನಂ. ಸ್ಥಾನ ಪಡೆದಿದ್ದರು. ಅವರ ಬಳಿಕ ಇದೀಗ ಸ್ಟೋಕ್ಸ್ ನಂ.1 ಆಲ್‌ರೌಂಡರ್ ಸ್ಥಾನಕ್ಕೇರಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ರವೀಂದ್ರ ಜಡೇಜ ಮೂರನೇ ಸ್ಥಾನದಲ್ಲಿದ್ದಾರೆ, ಆಸ್ಟ್ರೇಲಿಯದ ಮಿಚೆಲ್ ಸ್ಟಾರ್ಕ್ ಮತ್ತು ರವಿಚಂದ್ರನ್ ಅಶ್ವಿನ್ ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳನ್ನು ಗಳಿಸಿದ್ದಾರೆ.

ಬ್ಯಾಟ್ಸ್‌ಮನ್‌ಗಳ ಪೈಕಿ ತಲಾ 827 ಪಾಯಿಂಟ್ಸ್ ಗಳಿಸಿರುವ ಸ್ಟೋಕ್ಸ್ 3ನೇ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸ್ಟೀವ್ ಸ್ಮಿತ್ (911) ಅಗ್ರ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ (886) ಎರಡನೇ, ಕೇನ್ ವಿಲಿಯಮ್ಸನ್ (812) ಐದನೇ ಮತ್ತು ಬಾಬರ್ ಆಝಮ್ (800) 6ನೇ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್‌ನ ಹಂಗಾಮಿ ನಾಯಕ ಜೋ ರೂಟ್ ಒಂಬತ್ತನೇ ಸ್ಥಾನದಲ್ಲಿದ್ದರೆ, ಓಪನರ್ ಡೊಮಿನಿಕ್ ಸಿಬ್ಲೇ ಮೊದಲ ಇನಿಂಗ್ಸ್‌ನಲ್ಲಿ 120 ರನ್ ಗಳಿಸಿ ವೃತ್ತಿಜೀವನದ ಅತ್ಯುತ್ತಮ 35 ನೇ ಸ್ಥಾನಕ್ಕೆ ತಲುಪಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‌ನಿಂದ ಆಡಿರದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ ಎಂಟನೇ ಮತ್ತು 10 ನೇ ಸ್ಥಾನದಲ್ಲಿದ್ದಾರೆ.

ಮೊದಲ ಟೆಸ್ಟ್‌ಗೆ ಆಯ್ಕೆಯಾಗದ ಸ್ಟುವರ್ಟ್ ಬ್ರಾಡ್ ಎರಡನೇ ಟೆಸ್ಟ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡು ಪ್ರತಿ ಇನಿಂಗ್ಸ್‌ನಲ್ಲಿ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದು, ಬೌಲರ್‌ಗಳ ಶ್ರೇಯಾಂಕದಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಅವರು ಈಗ ಇಂಗ್ಲೆಂಡ್‌ನ ಅಗ್ರ ಶ್ರೇಯಾಂಕದ ಬೌಲರ್ ಆಗಿದ್ದಾರೆ. ಜೇಮ್ಸ್ ಆ್ಯಂಡರ್ಸನ್ (759) ಅವರಿಗಿಂತ 9 ಪಾಯಿಂಟ್ಸ್ ಮುಂದಿದ್ದಾರೆ, ಅವರು ಒಂದು ಪಂದ್ಯಕ್ಕೆ ವಿಶ್ರಾಂತಿ ಪಡೆದ ನಂತರ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. 100 ವಿಕೆಟ್‌ಗಳ ಗಡಿ ತಲುಪಲು ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ ಕ್ರಿಸ್ ವೋಕ್ಸ್ 21ನೇ ಸ್ಥಾನದಲ್ಲಿದ್ದಾರೆ, ಇದು 2016ರ ಅಂತ್ಯದ ನಂತರ ಅತ್ಯುತ್ತಮ ಶ್ರೇಯಾಂಕವಾಗಿದೆ.

ವೆಸ್ಟ್ ಇಂಡೀಸ್‌ನ ಶಮರ್ ಬ್ರೂಕ್ಸ್ 68 ಮತ್ತು 62 ಸ್ಕೋರ್ ಗಳಿಸಿ ವೃತ್ತಿಜೀವನದ ಅತ್ಯುತ್ತಮ 45ನೇ ಸ್ಥಾನಕ್ಕೆ ತಲುಪಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಮತ್ತು ನೀಲ್ ವ್ಯಾಗ್ನರ್ ಅವರ ನಂತರ ಹೋಲ್ಡರ್ ಬೌಲರ್‌ಗಳಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಓಲ್ಡ್ ಟ್ರಾಫರ್ಡ್‌ನಲ್ಲಿನ ಗೆಲುವು ಇಂಗ್ಲೆಂಡನ್ನು ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಏರಿಸಿದೆ. ಒಟ್ಟು ಈವರೆಗೆ 186 ಪಾಯಿಂಟ್ಸ್ ಗಳಿಸಿದ್ದು, ನ್ಯೂಝಿಲ್ಯಾಂಡ್‌ಗಿಂತ ಆರು ಹೆಚ್ಚು ಪಾಯಿಂಟ್ಸ್ ಪಡೆದಿದೆ.

ಭಾರತ 360 ಪಾಯಿಂಟ್ಸ್‌ನೊಂದಿಗೆ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ. ಆಸ್ಟ್ರೇಲಿಯ (296) ಎರಡನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News