×
Ad

ಚಿಕ್ಕಮಗಳೂರು: ಭೂ ಮಾಲಕನಿಂದ ದಲಿತರ ಗುಡಿಸಲು ತೆರವು, ಸ್ಮಶಾನ ಜಾಗ ಒತ್ತುವರಿ; ಆರೋಪ

Update: 2020-07-22 22:50 IST

ಚಿಕ್ಕಮಗಳೂರು, ಜು.22: ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಕ್ಕೆರೆ ಗ್ರಾಮದಲ್ಲಿ ಭೂ ಮಾಲಕನೋರ್ವ ಸರಕಾರಿ ಜಾಗದಲ್ಲಿ ದಲಿತ ಕುಟುಂಬಗಳು ನಿರ್ಮಿಸಿದ್ದ ಗುಡಿಸಲುಗಳನ್ನು ನಾಶ ಮಾಡಿದ್ದಾರೆ. ಅಲ್ಲದೇ ದಲಿತರಿಗೆ ಸೇರಿರುವ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ವತಿಯಿಂದ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತ ದಲಿತರಿಗೆ ನ್ಯಾಯ ಒದಗಿಸುವುದರೊಂದಿಗೆ ಭೂಮಾಲಕನ ದೌರ್ಜನ್ಯದ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬುಧವಾರ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಮುಖಂಡ ಕೌಳಿ ರಾಮು ನೇತೃತ್ವದಲ್ಲಿ ಭೂಮಾಲಕನ ದೌರ್ಜನ್ಯದ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೊಂದ ಗ್ರಾಮಸ್ಥರು, ಶೃಂಗೇರಿ ತಾಲೂಕು ಕಿಕ್ಕರೆ ಗ್ರಾಮದ ಸರ್ವೇ ನಂ.156ರಲ್ಲಿ ಸುಮಾರು 10ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುತ್ತಿದ್ದು, ಎರಡು ಎಕರೆ ಸ್ಮಶಾನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ಸರಕಾರ ಒಂದು ಎಕರೆ ಜಾಗ ನಿವೇಶನಕ್ಕಾಗಿ ಮಂಜೂರು ಮಾಡಿದೆ. ಆದರೆ, ಗ್ರಾಮದ ಭೂ ಮಾಲಕ ರಮೇಶ್ ಗೌಡ ಎಂಬಾತ ಇತ್ತೀಚೆಗೆ ರಾತ್ರೋರಾತ್ರಿ ಬೆದರಿಕೆ ಹಾಕಿ ದಲಿತರ ಸ್ಮಶಾನ ಜಾಗ ಒತ್ತುವರಿ ಮಾಡಿರುವುದಲ್ಲದೇ ಸರಕಾರಿ ಜಾಗದಲ್ಲಿ ಐದು ಕುಟುಂಬಗಳು ನಿರ್ಮಿಸಿದ್ದ ಗುಡಿಸಲುಗಳನ್ನು ನಾಶಪಡಿಸಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ, ಜಿಲ್ಲಾಡಳಿತ ತಕ್ಷಣ ದಲಿತರ ಮೇಲೆ ದೌರ್ಜನ್ಯ ನಡೆಸಿದವರ ಮೇಲೆ ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಭೂ ಒತ್ತುವರಿ ಮಾಡಿರುವರ ಮೇಲೆ ಭೂಕಬಳಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಸ್ಮಶಾನ ಭೂಮಿ ಹಾಗೂ ನಿವೇಶನಕ್ಕೆ ಮಂಜೂರಾಗಿರುವ ಭೂಮಿಯನ್ನು ಬಿಡಿಸಿಕೊಡಬೇಕೆಂದು ಆಗ್ರಹಿಸಿದರು.

ದೌರ್ಜನ್ಯ ನಡೆಸುತ್ತಿರುವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭೂಮಿ ಮತ್ತು ವಸತಿ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿಯನ್ನೂ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ, ಜೀವಿತ, ಶಂಕರ, ಕುಮಾರ್, ಸವಿತಾ, ಪ್ರತಿಮಾ, ಆನಂದ, ವೆಂಕಟೇಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News