×
Ad

ಚೆಕ್ ಪೋಸ್ಟ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೇರಳದ ಯುವಕ- ಶಿವಮೊಗ್ಗದ ಯುವತಿ

Update: 2020-07-22 23:02 IST

ಗುಂಡ್ಲುಪೇಟೆ, ಜು.22: ಕರ್ನಾಟಕ ಕೇರಳ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿಯೇ ಕೇರಳ ಮೂಲದ ಯುವಕ ಹಾಗೂ ರಾಜ್ಯದ ಶಿವಮೊಗ್ಗ ಜಿಲ್ಲೆಯ ಯುವತಿ ವಿವಾಹವಾದ ಘಟನೆ ನಡೆದಿದೆ.

ಚಾಮರಾಜನಗರ ಕೇರಳ ಗಡಿಯ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಕರ್ನಾಟಕ ಗಡಿ ಮೂಲೆಹೊಳೆಯಲ್ಲಿ ಮಧ್ಯಾಹ್ನ ಕೇರಳ ಮೂಲದ ಯುವಕನೊಂದಿಗೆ ಶಿವಮೊಗ್ಗ ಮೂಲದ ಯುವತಿ ಪರಸ್ಪರ ಹಾರ ಬದಲಾಯಿಸಿ ಕೊಂಡು, ವರ ಮಾಂಗಲ್ಯ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊರೋನ ನಿಯಮ ಉಲ್ಲಂಘಿಸಬಾರದೆಂಬ ಉದ್ದೇಶದಿಂದ ದಂಪತಿಗಳು ಈ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಅಂತರಾಜ್ಯ ಪ್ರಯಾಣ ಮಾಡಿದರೆ ಕ್ವಾರಂಟೈನ್ ಆಗಬೇಕು. ಹೀಗಾಗಿ ಜೋಡಿ ಈ ಪ್ಲಾನ್ ಮಾಡಿದೆ.

ಕಳೆದ ತಿಂಗಳು ಕೊರೋನ ಸೋಂಕಿನ ಭೀತಿಯ ನಡುವೆ ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಇದೀಗ ಮನೆಯವರ ಸಮ್ಮತಿಯೊಂದಿಗೆ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ, ರಸ್ತೆಯಲ್ಲೇ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಂಧು ಮಿತ್ರರು ಹಾಗೂ ಗಡಿಯಲ್ಲಿದ್ದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News