×
Ad

ಚಿಕ್ಕಮಗಳೂರು: ಜಿಲ್ಲೆಯಲ್ಲಿ 82 ಮಂದಿಗೆ ಕೊರೋನ ಪಾಸಿಟಿವ್; ವೃದ್ಧರಿಬ್ಬರು ಮೃತ್ಯು

Update: 2020-07-22 23:11 IST

ಚಿಕ್ಕಮಗಳೂರು, ಜು.22: ಜಿಲ್ಲೆಯಲ್ಲಿ ಬುಧವಾರ 82 ಮಂದಿಯಲ್ಲಿ ಕೊರೋನ ಸೋಂಕಿತರು ಪತ್ತೆಯಾಗಿದ್ದು, ಸೋಂಕಿಗೆ ತುತ್ತಾಗಿ ಕೊರೋನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಚಿಕ್ಕಮಗಳೂರು ಹಾಗೂ ಕಡೂರು ತಾಲೂಕು ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಕರಣಗಳು ಬುಧವಾರ ವರದಿಯಾಗಿದ್ದು, ಒಂದೇ ದಿನ ಚಿಕ್ಕಮಗಳೂರಿನಲ್ಲಿ 29 ಪ್ರಕರಣಗಳು ಹಾಗೂ ಕಡೂರು ತಾಲೂಕಿನಲ್ಲಿ 21 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಮೂಡಿಗೆರೆ ತಾಲೂಕಿನಲ್ಲಿ 13, ನರಸಿಂಹರಾಜಪುರ 8, ಕೊಪ್ಪ 5, ತರೀಕೆರೆ 3, ಶೃಂಗೇರಿ 2 ಹಾಗೂ ಅಜ್ಜಂಪುರ ತಾಲೂಕಿನಲ್ಲಿ ಬುಧವಾರ 1 ಪ್ರಕರಣಗಳು ದಾಖಲಾಗಿರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ.

ಸೋಂಕಿತರನ್ನು ನಗರದ ಕೋವಿಡ್ ಆಸ್ಪತ್ರೆಗಳಿಗೆ ದಾಖಲು ಮಾಡಿರುವ ಜಿಲ್ಲಾಡಳಿತ ಚಿಕಿತ್ಸೆ ನೀಡಲು ಕ್ರಮವಹಿಸಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಗಳ ಪತ್ತೆಗೆ ಅಧಿಕಾರಿಗಳ ತಂಡವನ್ನು ನೇಮಿಸಲಾಗಿದ್ದು, ಸೋಂಕಿತರ ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತರು ಪತ್ತೆಯಾದ ಪ್ರದೇಶಗಳ ವ್ಯಾಪ್ತಿಯಲ್ಲಿ ಕಂಟೈನ್‍ಮೆಂಟ್ ಝೋನ್‍ಗಳನ್ನು ಗುರುತಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಪ್ರದೇಶಗಳನ್ನು ನಿಯಂತ್ರಿಸಲು ಸ್ಥಳೀಯ ತಹಶೀಲ್ದಾರ್ ಗಳಿಗೆ ಅಧಿಕಾರ ನೀಡಲಾಗಿದೆ.

ಬುಧವಾರ ಜಿಲ್ಲೆಯಲ್ಲಿ ವರದಿಯಾಗಿರುವ 82 ಸೋಂಕಿತರೂ ಸೇರಿದಂತೆ ಒಟ್ಟು ಪ್ರಕರಣಗಳ ಸಂಖ್ಯೆ 484ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 256 ಮಂದಿಗೆ ಕೋವಿಡ್ ಚಿಕಿತ್ಸಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಸೋಂಕಿನಿಂದ ಗುಣಮುಖರಾದ 51 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಗರದ ಮಾರ್ಕೆಟ್ ರಸ್ತೆಯ 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದre, ಬುಧವಾರ ಮಧ್ಯಾಹ್ನ 74 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಈ ವೃದ್ಧರಿಬ್ಬರು ಇತ್ತೀಚೆಗೆ ಕೊರೋನ ಪಾಸಿಟಿವ್ ಹಿನ್ನೆಲೆಯಲ್ಲಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದು, ವೃದ್ಧರಿಬ್ಬರಿಗೆ ಕೊರೋನ ಸೋಂಕಿನೊಂದಿಗೆ ಬಿಪಿ, ಶುಗರ್ ಇದ್ದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ 2 ಸಾವಿನ ಪ್ರಕರಣ ಸೇರಿ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 12ಕ್ಕೇರಿದ್ದು, ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. 

ಒಂದೇ ಕುಟುಂಬದ 10 ಮಂದಿಗೆ ಸೋಂಕು
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿ ಒಂದೇ ಮನೆಯ 10 ಮಂದಿಗೆ ಸೋಂಕು ಇರುವುದು ಬುಧವಾರ ಪತ್ತೆಯಾಗಿದ್ದು, ಪಟ್ಟಣದ ಪೊಲೀಸ್ ಠಾಣೆಯ ಪೇದೆಯೊಬ್ಬರಲ್ಲೂ ಪಾಸಿಟಿವ್ ಇರುವುದು ಪತ್ತೆಯಾಗಿದೆ. 10 ಮಂದಿಯ ಕುಟುಂಬದಲ್ಲಿ ಈ ಹಿಂದೆ ನಾಲ್ವರಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಈ ನಾಲ್ವರು ಗುಣಮುಖರಾಗಿ ಮನೆಗೆ ಬರುತ್ತಿದ್ದಂತೆ ಅದೇ ಮನೆಯ 10 ಮಂದಿಗೆ ಸೋಂಕು ತಗುಲಿರುವುದು ಬುಧವಾರ ಪ್ರಯೋಗಾಲಯದ ವರದಿಯಿಂದ ತಿಳಿದುಬಂದಿದೆ. 

ಮೂಡಿಗೆರೆ ತಾಲೂಕಿನಲ್ಲಿ ಬುಧವಾರ 13 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 12 ಪ್ರಕರಣಗಳು ಕಳಸ ಪಟ್ಟಣದಲ್ಲೇ ವರದಿಯಾಗಿದ್ದು, ಪಟ್ಟಣದಲ್ಲಿನ ಒಂದೇ ಕುಟುಂಬದ 10 ಮಂದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಈ ಕುಟುಂಬದ ವೃದ್ಧೆಯೊಬ್ಬರಿಗೆ ಮೊದಲ ಬಾರಿಗೆ ಪಾಸಿಟಿವ್ ಇರುವುದು ಈ ಹಿಂದೆ ಬೆಳಕಿಗೆ ಬಂದಿದ್ದು, ಅದೇ ಕುಟುಂಬದ 10 ಮಂದಿಗೆ ಇದೀಗ ಸೋಂಕು ತಗುಲಿರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ.

ಕಳಸ ಪಟ್ಟಣದ ಒಂದೇ ಮನೆಯ 10 ಮನೆಯಲ್ಲಿ ಸೋಂಕು ದೃಢಪಟ್ಟಿರುವ ಪೈಕಿ ಮೂವರು ಮಹಿಳೆಯರಿದ್ದು, 11ಮತ್ತು 15 ವರ್ಷದ ಇಬ್ಬರು ಬಾಲಕರು ಸೇರಿ ಏಳು ಜನ ಪುರುಷರಾಗಿದ್ದಾರೆ. ಪಟ್ಟದಲ್ಲಿ ಇದುವರೆಗೆ ವರದಿಯಾಗಿರುವ ಪಾಸಿಟಿವ್ ಪ್ರಕರಣಗಳ ಪೈಕಿ ಇದೇ ಕುಟುಂಬದ ಓರ್ವ ವೃದ್ಧೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ವೃದ್ದೆಯ ಪಾಸಿಟಿವ್ ಪ್ರಕರಣದ ಬಳಿಕ ಆ ಮನೆಯ ಎಲ್ಲ ಸದಸ್ಯರನ್ನು ಪರೀಕ್ಷೆ ಮಾಡಿದ್ದು, ಆಗ ಎಲ್ಲರಿಗೂ ನೆಗೆಟಿವ್ ಬಂದಿತ್ತು. ಆದರೆ ವೃದ್ಧೆಯ ಕುಟುಂಬದ ಸದಸ್ಯರಿಗೆ ಎರಡನೇ ಬಾರಿಗೆ ಬಾರಿ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಕಳಸ ಪಟ್ಟಣದಲ್ಲಿ ಬುಧವಾರ ವರದಿಯಾಗಿರುವ ಉಳಿದೆರೆಡು ಪ್ರಕರಣಗಳ ಪೈಕಿ ಕಳಸ ಪೊಲೀಸ್ ಠಾಣೆಯ ಮತ್ತೋರ್ವ ಪೇದೆಯಲ್ಲಿ ಸೋಂಕು ದೃಢಪಟ್ಟಿದ್ದು, ತೋಟದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡೆಕುಡಿಗೆ ಗ್ರಾಮದ ವ್ಯಕ್ತಿಯೋರ್ವರಿಗೆ ಸೋಂಕು ಇರುವುದು ಬುಧವಾರ ವರದಿಯಾಗಿದೆ. ತೋಟದೂರು ಗ್ರಾಮದ ವ್ಯಕ್ತಿ ಇತ್ತೀಚೆಗೆ ಬೆಂಗಳೂರಿನಿಂದ ಹಿಂದಿರುಗಿದ್ದರೆಂದು ತಿಳಿದು ಬಂದಿದೆ.

ಬುಧವಾರ ಕಳಸ ಪಟ್ಟಣದಲ್ಲಿ ವರದಿಯಾಗಿರುವ 12 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 82 ಪ್ರಕರಣಗಳು ವರದಿಯಾಗಿವೆ. ಪಟ್ಟಣದಲ್ಲಿ ವರದಿಯಾದ 12 ಸೋಂಕಿತರನ್ನು ಚಿಕ್ಕಮಗಳೂರು ನಗರದ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದೆ. ಸೋಂಕಿತರ ಮನೆ ಹಾಗೂ ಪೊಲೀಸ್ ಠಾಣೆ, ಪೇದೆ ವಾಸವಿದ್ದ ಮನೆಯನ್ನು ಸೀಲ್‍ಡೌನ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News