ಬೆಳಗಾವಿ: ಚಿಕಿತ್ಸೆಗೆ ಸ್ಪಂದಿಸದೆ ರೋಗಿ ಸಾವು; ಆ್ಯಂಬುಲೆನ್ಸ್ ‌ಗೆ ಬೆಂಕಿ ಹಚ್ಚಿದ ಸಂಬಂಧಿಕರು

Update: 2020-07-22 18:08 GMT

ಬೆಳಗಾವಿ, ಜು.22: ಚಿಕಿತ್ಸೆಗೆ ಸ್ಪಂದಿಸದೆ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆ ರೊಚ್ಚಿಗೆದ್ದ ಮೃತ ವ್ಯಕ್ತಿಯ ಸಂಬಂಧಿಕರು ಬಿಮ್ಸ್‌ ಆಸ್ಪತ್ರೆ ಎದುರು ನಿಲ್ಲಿಸಿದ್ದ ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಿದ ಘಟನೆ ಬುಧವಾರ ರಾತ್ರಿ ನಡೆದಿದೆ ಎನ್ನಲಾಗಿದೆ.

ಬೆಳಗಾವಿಯ 55 ವರ್ಷದ ವ್ಯಕ್ತಿಯನ್ನು ಜು.19ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳು ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದಲ್ಲದೇ ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿ, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.

ಆ್ಯಂಬುಲೆನ್ಸ್ ‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯ ಸುತ್ತ ಇನ್ನೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್‌ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News