×
Ad

ಕೆಪಿಸಿಸಿ ಕಾನೂನು, ಮಾನವ ಹಕ್ಕು ಮತ್ತು ಆರ್ ಟಿಐ ಘಟಕದ ಅಧ್ಯಕ್ಷರಾಗಿ ಎ.ಎಸ್. ಪೊನ್ನಣ್ಣ ನೇಮಕ

Update: 2020-07-23 16:50 IST

ಪೊನ್ನಂಪೇಟೆ, ಜು.23: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ಕಾನೂನು, ಮಾನವ ಹಕ್ಕು ಮತ್ತು ಆರ್ ಟಿಐ ಘಟಕದ ಅಧ್ಯಕ್ಷರಾಗಿ ಅಜ್ಜೀಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ನೇಮಿಸಲಾಗಿದೆ. ಇದರಿಂದಾಗಿ ಕೊಡಗಿನ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ಹುದ್ದೆಯೊಂದು ದಕ್ಕಿದಂತಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯರಾದ ಕೆ.ಸಿ. ವೇಣುಗೋಪಾಲ್ ಅವರು, ತಕ್ಷಣದಿಂದಲೇ ಜಾರಿಗೆ ಬರುವಂತೆ ಪೊನ್ನಣ್ಣ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. 

ಕರ್ನಾಟಕ ಹೈಕೋರ್ಟ್ ನ ಹಿರಿಯ ವಕೀಲರಾಗಿರುವ ಎ.ಎಸ್. ಪೊನ್ನಣ್ಣ ಅವರು, ಈ ಹಿಂದೆ ರಾಜ್ಯ ಸರಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. 

ಇವರೊಂದಿಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ಘಟಕದ ಅಧ್ಯಕ್ಷರಾಗಿ ಹಿರಿಯ ಮುಖಂಡ ಬಿ.ಎಲ್. ಶಂಕರ್, ಉಪಾಧ್ಯಕ್ಷರಾಗಿ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಕೆಪಿಸಿಸಿ ಮಾಹಿತಿ ತಂತ್ರಜ್ಞಾನ ಮತ್ತು ಡಾಟಾ ಸಂಗ್ರಹ ಅಧ್ಯಕ್ಷರಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾನೂನು ಸುಧಾರಣೆ ಘಟಕದ ಅಧ್ಯಕ್ಷರಾಗಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಕಾಂಗ್ರೆಸ್ ಪಕ್ಷದ ಆಸ್ತಿ ಮತ್ತು ಸೊತ್ತು (ರಾಜ್ಯ) ಘಟಕದ ಅಧ್ಯಕ್ಷರಾಗಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಕಾಂಗ್ರೆಸ್ ಪಕ್ಷದ ಆಸ್ತಿ ಮತ್ತು ಸೊತ್ತು (ಬೆಂಗಳೂರು ನಗರ) ಅಧ್ಯಕ್ಷರಾಗಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ನೇಮಿಸಲಾಗಿದೆ ಎಂದು ಕೆ.ಸಿ. ವೇಣುಗೋಪಾಲ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾನೂನು ತಜ್ಞರಾಗಿರುವ ಪೊನ್ನಣ್ಣ ಅವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹುದಿಕೇರಿ ಸಮೀಪದ ಕೋಣಗೇರಿ ಗ್ರಾಮದವರಾಗಿದ್ದು, ರಾಜ್ಯದ ಹಿರಿಯ ನ್ಯಾಯವಾದಿಗಳಾಗಿದ್ದ ದಿ.ಎ.ಕೆ. ಸುಬ್ಬಯ್ಯ ಅವರ ಪುತ್ರರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News